×
Ad

ವೇಮುಲ ಸಾವಿನ ವರದಿ ಕೋರಿದ್ದ ಆರ್‌ಟಿಐ ಅರ್ಜಿ ಎಚ್‌ಆರ್‌ಡಿ ಸಚಿವಾಲಯದಿಂದ ತಿರಸ್ಕೃತ

Update: 2017-01-22 14:36 IST

ಹೊಸದಿಲ್ಲಿ,ಜ.22: ಕಳೆದ ವರ್ಷದ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್ ವಿವಿಯ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಸಾವಿನ ಕುರಿತು ರೂಪನ್‌ವಾಲ ಆಯೋಗದ ವರದಿಯನ್ನು ಬಹಿರಂಗಗೊಳಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್‌ಆರ್‌ಡಿ) ಸಚಿವಾಲಯವು ತಿರಸ್ಕರಿಸಿದೆ.

ಸಂಬಂಧಿತ ಕಡತವು ‘ಸಲ್ಲಿಕೆ ಪ್ರಕ್ರಿಯೆ’ಯಲ್ಲಿದೆ ಮತ್ತು ವರದಿಯ ಪ್ರತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸಚಿವಾಲಯವು ಅರ್ಜಿಗೆ ನೀಡಿರುವ ಉತ್ತರದಲ್ಲಿ ತಿಳಿಸಿತ್ತು.

ಈ ಉತ್ತರದಿಂದ ಅಸಮಾಧಾನಗೊಂಡಿದ್ದ ಅರ್ಜಿದಾರರು ಸಚಿವಾಲಯದ ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು.

ಈ ಮೊದಲು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ನೀಡಿರುವ ಉತ್ತರದಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ಮೇಲ್ಮನವಿ ಪ್ರಾಧಿಕಾರದ ಉತ್ತರಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲ್ಮನವಿಯನ್ನು ವಿಲೇವಾರಿಗೊಳಿಸಲಾಗಿದೆ ಎಂದು ಸಚಿವಾಲಯವು ಪಿಟಿಐ ಸುದ್ದಿಸಂಸ್ಥೆಯು ಸಲ್ಲಿಸಿದ್ದ ಮೇಲ್ಮನವಿಗೆ ಉತ್ತರಿಸಿದೆ.

 ವೇಮುಲ ಆತ್ಮಹತ್ಯೆಗೆ ಕಾರಣವಾಗಿದ್ದ ಹೈದರಾಬಾದ್ ವಿವಿಯಲ್ಲಿನ ಘಟನೆಗಳ ಪರಿಶೀಲನೆಗಾಗಿ ಸಚಿವಾಲಯವು ಕಳೆದ ವರ್ಷದ ಫೆಬ್ರವರಿಯಲ್ಲಿ ನಿವೃತ್ತ ನ್ಯಾ.ಅಶೋಕ ಕುಮಾರ್ ರೂಪನ್‌ವಾಲ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿತ್ತು. ಆಯೋಗವು ತನ್ನ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದ ಬಳಿಕ, ಆಯೋಗವು ವೇಮುಲ ಅವರು ದಲಿತರು ಎನ್ನುವ ಬಗ್ಗೆ ಪ್ರಶ್ನೆಗಳನ್ನೆತ್ತಿತ್ತು ಮತ್ತು ವೈಯಕ್ತಿಕ ಕಾರಣಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು. ವಿವಿ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡದಡಿ ಕೆಲಸ ಮಾಡುತ್ತಿಲ್ಲ ಎಂದು ಎತ್ತಿ ಹಿಡಿದಿದ್ದ ಆಯೋಗವು ಅವರ ವಿರುದ್ಧದ ದೂರುಗಳನ್ನೂ ತಳ್ಳಿಹಾಕಿತ್ತು.

ಈ ಉತ್ತರ ತೃಪ್ತಿಕರವಾಗಿಲ್ಲದಿದ್ದರೆ ನೀವು ಕೇಂದ್ರೀಯ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ ಎಂದೂ ಮೇಲ್ಮನವಿ ಪ್ರಾಧಿಕಾರವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News