ಪಾಕ್‌ನಲ್ಲಿ ಬಾಲಿವುಡ್ ಚಿತ್ರಗಳ ನಿಷೇಧ ಅಂತ್ಯ ಸನ್ನಿಹಿತ

Update: 2017-01-22 17:39 GMT

ಕರಾಚಿ,ಜ.21: ಪಾಕಿಸ್ತಾನದಲ್ಲಿ ಬಾಲಿವುಡ್ ಚಿತ್ರಗಳಿಗೆ ವಿಧಿಸಿರುವ ನಿರ್ಬಂಧಗಳು ಶೀಘ್ರದಲ್ಲೇ ಕೊನೆಗೊಳ್ಳುವ ದಿನಗಳು ಸನ್ನಿಹಿತವಾಗಿವೆ. ಭಾರತೀಯ ಚಿತ್ರಗಳ ಬಿಡುಗಡೆಗೆ ಪಾಕ್ ಸರಕಾರದ ಯಾವುದೇ ಆಕ್ಷೇಪವಿಲ್ಲದೆ ಇರುವುದರಿಂದ ಸದ್ಯದಲ್ಲೇ ನೂತನ ಬಾಲಿವುಡ್ ಚಿತ್ರಗಳಲ್ಲಿ ದೇಶದಲ್ಲಿ ತೆರೆಕಾಣುವುದು ಖಚತವೆಂದು ಪಾಕ್ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ರೊರೈಝ್ ಲಷರಿ ತಿಳಿಸಿದ್ದಾರೆ.

ಕಳೆದ ವರ್ಷ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಸರ್ಜಿಕಲ್ ದಾಳಿ ನಡೆಸಿದ ಬಳಿ ಉಭಯದೇಶಗಳ ನಡುವಿನ ಬಾಂಧವ್ಯ ಹದಗೆಟ್ಟಿದ್ದರೂ, ಪಾಕ್ ಸರಕಾರವು ಭಾರತೀಯ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸಿರಲಿಲ್ಲ.

ಬದಲಿಗೆ ಸಿನೆಮಾ ವಿತರಕರು, ಪ್ರದರ್ಶಕರು ಹಾಗೂ ಸಿನೆಮಾ ಮಂದಿರಗಳ ಮಾಲಕರುಗಳು ನೂತನ ಭಾರತೀಯ ಚಿತ್ರಗಳ ಆಮದಿಗೆ ಸಂಬಂಧಿಸಿ ನಿರಾಕ್ಷೇಪಣಾ ಪತ್ರಗಳನ್ನು ಪಡೆಯುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಇದೀಗ ಪ್ರಧಾನಿ ನವಾಝ್ ಶರೀಫ್ ಈ ವಿಚಾರವಾಗಿ ಚರ್ಚಿಸಲು ವಿಶೇಷ ಸಮಿತಿಯೊಂದನ್ನು ರಚಿಸಿದ್ದಾರೆ ಹಾಗೂ ಪಾಕ್‌ನಲ್ಲಿ ಹೊಸ ಭಾರತೀಯ ಚಿತ್ರಗಳ ಬಿಡುಗಡೆಗೆ ಸುಗಮ ಹಾದಿ ಕಲ್ಪಿಸಿದ್ದಾರೆಂದು ಹೇಳಿದ್ದಾರೆ.

ಜಮ್ಮುಕಾಶ್ಮೀರದ ಉರಿಯ ಸೇನಾನೆಲೆಯಲ್ಲಿ ಪಾಕ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ ಬಳಿಕ ಭಾರತೀಯ ಚಿತ್ರಗಳಲ್ಲಿ ಪಾಕ್ ತಾರೆಯರನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಪಾಕ್ ಚಿತ್ರ ಮಂದಿರಗಳ ಮಾಲಕರು ಭಾರತೀಯ ಸಿನೆಮಾಗಳ ಪ್ರದರ್ಶನವನ್ನು ನಿಲ್ಲಿಸಿದ್ದವು.

ಅಮೀರ್‌ಖಾನ್‌ರ ಸೂಪರ್‌ಹಿಟ್ ಚಿತ್ರ ಧಂಗಾಲ್ ಹಾಗೂ ಶಾರೂಕ್ ಅಭಿನಯದ ಶೀಘ್ರವೇ ತೆರೆಕಾಣಲಿರವ ರಾಯೀಸ್ ಚಿತ್ರಗಳ ಪ್ರತಿಗಳನ್ನು ಆಮದು ಮಾಡಿಕೊಳ್ಳಲು ಪಾಕ್ ವಿತರಕರು ಶೀಘ್ರದಲ್ಲೇ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಲಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News