ಇಂದು ರಾತ್ರಿ ಪ್ರಧಾನಿ ಮೋದಿಗೆ ಟ್ರಂಪ್ ‘ಕಾಲಿಂಗ್’
ಹೊಸದಿಲ್ಲಿ, ಜ.24: ನಾಲ್ಕು ದಿನಗಳ ಹಿಂದೆ ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡೊನಾಲ್ಡ್ ಟ್ರಂಪ್ ಇಂದು ತಡರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕರೆ ಮಾಡಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ನೂತನ ಅಧ್ಯಕ್ಷರು ರಾತ್ರಿ 1.00(ಸ್ಥಳೀಯ ಕಾಲಮಾನ) ಅಂದರೆ ಭಾರತೀಯ ಕಾಲಮಾನ 11.30ಕ್ಕೆ ಭಾರತದ ಪ್ರಧಾನಮಂತ್ರಿಯೊಂದಿಗೆ ಫೋನ್ ಮೂಲಕ ಮಾತನಾಡಲಿದ್ದಾರೆ ಎಂದು ವೈಟ್‌ಹೌಸ್ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ನ್ಯೂಯಾರ್ಕ್‌ನ ಬಿಲಿಯಾಧಿಪತಿ ಡೊನಾಲ್ಡ್ ಟ್ರಂಪ್ ನ.8 ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂದರ್ಭದಲ್ಲಿ ಮೋದಿ ಅವರು ಟ್ರಂಪ್‌ಗೆ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದ್ದರು.
ಟ್ರಂಪ್ ಜ.20 ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಫೋನ್ ಮೂಲಕ ಮಾತನಾಡಲಿರುವ ಐದನೆ ಜಾಗತಿಕ ನಾಯಕ ಭಾರತದ ಪ್ರಧಾನಮಂತ್ರಿ ಮೋದಿ. ಟ್ರಂಪ್ ಜ.21 ರಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೆಯೊ ಹಾಗೂ ಮೆಕ್ಸಿಕೊದ ಪ್ರೀಮಿಯರ್ ಪೆನಾ ನಿಯೆಟೊರೊಂದಿಗೆ ಫೋನ್ ಮೂಲಕ ಮಾತನಾಡಿದ್ದರು. ರವಿವಾರ ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಹಾಗೂ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ಫೋನ್ ಮುಖಾಂತರ ಮಾತನಾಡಿದ್ದರು.