ಮತ ನೀಡದಿದ್ದರೂ ಪರವಾಗಿಲ್ಲ, ಶೂ ಎಸೆಯಬೇಡಿ: ರಾಜನಾಥ್ ಸಿಂಗ್
ಅಮೃತಸರ್, ಜ.24: ಚುನಾವಣಾ ರ್ಯಾಲಿಯೊಂದರಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮೇಲೆ ಶೂ ಎಸೆದ ಹಾಗೂ ಉಪಮುಖ್ಯಮಂತ್ರಿ ಸುಖಬೀರ್ ಬಾದಲ್ ಮೇಲೆ ಕಲ್ಲು ತೂರಿದ ಘಟನೆಯ ಬಗ್ಗೆ ಅಬೋಹರ್ ನಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ‘‘ಮತ ನೀಡದೇ ಇದ್ದರೂ ಪರವಾಗಿಲ್ಲ, ಶೂ ಮಾತ್ರ ಎಸೆಯಬೇಡಿ,’’ ಎಂದು ಜನರಲ್ಲಿ ಹೇಳಿದರು.
‘‘ನೀವು ನಮಗೆ ಮತ ನೀಡದೇ ಇದ್ದರೂ ಚಿಂತೆಯಿಲ್ಲ.ಆದರೆ ಅವರ ಮೇಲೆ ಲಾಠಿ ಬೀಸುತ್ತೀರೇನು, ಶೂ ಎಸೆಯುತ್ತೀರೇನು?’’ ಎಂದು ಪ್ರಶ್ನಿಸಿದರು.
ಪಂಜಾಬ್ ರಾಜ್ಯದಲ್ಲಿನ ಡ್ರಗ್ಸ್ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ ಅವರು ಈ ಸಮಸ್ಯೆಗೆ ಪಾಕಿಸ್ತಾನ ಕಾರಣವೆಂದು ಹೇಳಿದರಲ್ಲದೆ ಪಾಕಿಸ್ತಾನಕ್ಕೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದರು. ‘‘ಪಂಜಾಬ್ ರಾಜ್ಯಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿರುವವರಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ’’ ಎಂದು ರಾಜನಾಥ್ ಸಿಂಗ್ ಹೇಳಿದರು.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಉಲ್ಲೇಖಿಸುತ್ತಾ, ‘‘ನಾವು ಕೇವಲ ಈ ಬದಿಯಿಂದ ಮಾತ್ರ ಹೋರಾಟ ಮಾಡುವುದಿಲ್ಲ, ಅಗತ್ಯ ಬಿದ್ದರೆ ಆ ಕಡೆಯಿಂದಲೂ ಹೋರಾಟ ನಡೆಸುತ್ತೇವೆ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ,’’ ಎಂದರು.