'ರಈಸ್ ' ಪ್ರಚಾರ ಯಾತ್ರೆಯಲ್ಲಿ ಅಭಿಮಾನಿಯ ಸಾವಿಗೆ ಶಾರುಖ್ ಪ್ರತಿಕ್ರಿಯೆ ಏನು ನೋಡಿ....
ಮುಂಬೈ,ಜ.24: ಓರ್ವ ವ್ಯಕ್ತಿಯ ಸಾವು ಮತ್ತು ಇಬ್ಬರು ಪೊಲೀಸರು ಗಾಯಗೊಳ್ಳಲು ಕಾರಣವಾದ ವಡೋದರಾ ರೈಲು ನಿಲ್ದಾಣ ದುರಂತದ ಬಗ್ಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.
ತನ್ನ ಮುಂಬರುವ 'ರಈಸ್ 'ಚಿತ್ರದ ಪ್ರಚಾರಕ್ಕಾಗಿ ಆಗಸ್ಟ್ ಕ್ರಾಂತಿ ರಾಜಧಾನಿ ರೈಲಿನಲ್ಲಿ ಮುಂಬೈ-ದಿಲ್ಲಿ ಪ್ರಯಾಣ ಕೈಗೊಂಡಿದ್ದ ಶಾರುಖ್ ಮೃತರ ಕುಟುಂಬಕ್ಕೆ ಸಾಂತ್ವನವನ್ನು ಸೂಚಿಸಿದ್ದಾರೆ. ಸೋಮವಾರ ರಾತ್ರಿ ರೈಲು ವಡೋದರಾ ನಿಲ್ದಾಣವನ್ನು ತಲುಪಿದಾಗ ಶಾರುಖ್‌ರನ್ನು ನೋಡಲು ಭಾರೀಸಂಖ್ಯೆಯಲ್ಲಿ ಅಭಿಮಾನಿಗಳ ದಂಡು ಮುಗಿಬಿದ್ದಿತ್ತು. ಕೆಲವರು ಕಿಟಕಿಗಳ ಗಾಜನ್ನು ಬಡಿಯುತ್ತಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರವನ್ನು ನಡೆಸಬೇಕಾಯಿತು. ಈ ಗೊಂದಲದಲ್ಲಿ ಸ್ಥಳೀಯ ರಾಜಕಾರಣಿ ಫರೀದ್‌ಖಾನ್ ಪಠಾಣ ಹೃದಯಾಘಾತದಿಂದ ಮೃತಪಟ್ಟಿದ್ದರು. ಘಟನೆಯಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದರು.
ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತೆಯೋರ್ವರ ಸಂಬಂಧಿಯಾಗಿದ್ದ ಪಠಾಣ್ ಆಕೆಯನ್ನು ಮಾತನಾಡಿಸಲೆಂದು ನಿಲ್ದಾಣಕ್ಕೆ ಆಗಮಿಸಿದ್ದರು.
ನಮ್ಮ ಸಹೋದ್ಯೋಗಿಯೋರ್ವರು ನಮ್ಮೋಂದಿಗೆ ಪ್ರಯಾಣಿಸುತ್ತಿದ್ದರು. ವಡೋದರಾದಲ್ಲಿ ಅವರ ಅಂಕಲ್ ಆಕೆಯನ್ನು ನೋಡಲು ಬಂದಿದ್ದರು. ಈ ಸಂದರ್ಭ ಅವರು ಹೃದಯಾಘಾತಕ್ಕೆ ಗುರಿಯಾಗಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ ಎಂದು ಶಾರುಖ್ ಹೇಳಿದ್ದಾರೆ.
ಇಂದು ದಿಲ್ಲಿಯ ಹಝರತ್ ನಿಝಾಮುದ್ದೀನ್ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಪ್ರಾರ್ಥನೆಗಳು,ಸಂತಾಪಗಳು ದಿವಂಗತರ ಕುಟುಂಬದೊಂದಿಗಿವೆ. ಅಂತ್ಯಸಂಸ್ಕಾರದಲ್ಲಿ ನಮ್ಮ ತಂಡದ ಕೆಲವರು ಭಾಗಿಯಾಗಿದ್ದಾರೆ. ಎಂದರು.
ವಡೋದರಾ ರೈಲು ನಿಲ್ದಾಣದಲ್ಲಿ ಸೂಪರ್ ಸ್ಟಾರ್ ಭೇಟಿಗಾಗಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಅವರೂ ಕಾದು ನಿಂತಿದ್ದರು.
ಈ ಘಟನೆಯ ಬಳಿಕವೂ ರತ್ಲಾಮ್ ಮತ್ತು ಕೋಟಾ ನಿಲ್ದಾಣಗಳಲ್ಲಿ ಭಾರೀ ಸಂಖ್ಯೆಯಲ್ಲಿ ಶಾರುಖ್ ಅಭಿಮಾನಿಗಳು ಸೇರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.