×
Ad

ದಿಲ್ಲಿ- ಮುಂಬೈ ಪ್ರಯಾಣಕ್ಕೆ 70 ನಿಮಿಷ!

Update: 2017-01-25 09:33 IST

ಹೊಸದಿಲ್ಲಿ, ಜ.25: ದಿಲ್ಲಿಯಿಂದ ಮುಂಬೈಗೆ 70 ನಿಮಿಷದಲ್ಲಿ ಪ್ರಯಾಣ, ಚೆನ್ನೈ- ಮುಂಬೈ ಪ್ರಯಾಣಕ್ಕೆ ಕೇವಲ ಒಂದು ಗಂಟೆ. ಇಂಥ ಕನಸಿನಲ್ಲೂ ಎಣಿಸಲಾಗದ ತಂತ್ರಜ್ಞಾನ ಹೈಪರ್‌ಲೂಪ್ ಮೂಲಕ ಭಾರತಕ್ಕೆ ಲಗ್ಗೆ ಇಡಲು ಸಿದ್ಧತೆ ನಡೆದಿದೆ.

ಇದು ಹಾಲಿ ಇರುವ ಎಲ್ಲ ವ್ಯವಸ್ಥೆಗಳಿಗಿಂತ ವೇಗ ಹಾಗೂ ಅಗ್ಗದ ಸಂಚಾರ ಸಾಧನವಾಗಲಿದೆ ಎಂದು ಲಾಸ್ ಎಂಜಲೀಸ್ ಮೂಲದ ಸ್ಟಾರ್ಟ್‌ಟಪ್ ಕಂಪನಿಯ ಹಿರಿಯ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಟೆಸ್ಲಾ ಮೋಟರ್ಸ್‌ನ ಎಲಾನ್ ಮಸ್ಕ್ 2013ರಲ್ಲಿ ಮುಂದಿಟ್ಟ ಈ ವಿಶಿಷ್ಟ ತಂತ್ರಜ್ಞಾನ, ಕಡಿಮೆ ಒತ್ತಡದ ಸ್ಟೀಲ್ ಕೊಳವೆಯ ಮೂಲಕ ಸಂಚರಿಸುವ ವಿಧಾನ. ಇದಕ್ಕೆ ಅಗತ್ಯವಾದ ಸಾವಿರಾರು ಕೋಟಿ ಡಾಲರ್ ಕ್ರೋಢೀಕರಿಸುವ ಪ್ರಯತ್ನ ನಡೆದಿದೆ. ಭಾರತೀಯ ಹೂಡಿಕೆದಾರರೊಂದಿಗೂ ಚರ್ಚೆ ನಡೆಯುತ್ತಿದೆ ಎಂದು ಹೈಪರ್‌ಲೂಪ್ ವನ್‌ನ ಹಿರಿಯ ಉಪಾಧ್ಯಕ್ಷ ನಿಕ್ ಎರ್ಲೆ ಪ್ರಕಟಿಸಿದ್ದಾರೆ.

ವಿಶ್ವದಲ್ಲೇ ಅತ್ಯಧಿಕ ಮಂದಿ ಇದಕ್ಕೆ ಉತ್ಸಾಹ ತೋರಿಸಿರುವುದು ಭಾರತದಿಂದ. ಭಾರತದ ಹಲವು ಕಂಪನಿಗಳು, ಸಂಸ್ಥೆಗಳು ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿವೆ. ಈ ಹೊಸ ತಂತ್ರಜ್ಞಾನದ ಬಗ್ಗೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರಕಾರದ ಜತೆ ಚರ್ಚೆ ನಡೆದಿದೆ ಎಂದು ವಿವರಿಸಿದ್ದಾರೆ.

ಮಾರ್ಚ್ ವೇಳೆಗೆ ಅಮೆರಿಕದ ನೆವಡಾದಲ್ಲಿ ಈ ತಂತ್ರಜ್ಞಾನದ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ. ದುಬೈನ ಅಬುದಾಬಿ ಸೇರಿದಂತೆ ಈಗಾಗಲೇ ಏಳು ಕಡೆಗಳಲ್ಲಿ ಆರಂಭಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೊಟ್ಟಮೊದಲ ವಾಣಿಜ್ಯ ಯೋಜನೆ 2020ರ ವೇಳೆಗೆ ಕಾರ್ಯಗತಗೊಳ್ಳಲಿದೆ. ಇದಕ್ಕೆ 160 ದಶಲಕ್ಷ ಡಾಲರ್ ವೆಚ್ಚದ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News