ತಮಿಳುನಾಡಿನಿಂದ ಪೆಪ್ಸಿ, ಕೋಕ ಕೋಲ ಔಟ್ ?
ಚೆನ್ನೈ, ಜ.25: ಜಲ್ಲಿಕಟ್ಟು ಕ್ರೀಡೆಯ ವಿರುದ್ಧದ ನಿಷೇಧವನ್ನು ರದ್ದುಗೊಳಿಸಿ ಅದನ್ನು ಅನುಮತಿಸುವ ಮಸೂದೆಯನ್ನು ತಮಿಳುನಾಡಿನ ವಿಧಾನಸಭೆ ಅಂಗೀಕರಿಸಿದ ಮರುದಿನವೇ ರಾಜ್ಯದಎರಡು ಅತಿ ದೊಡ್ಡ ವಾಣಿಜ್ಯ ಸಂಘಟನೆಗಳು ತಮ್ಮ ಸದಸ್ಯರುಗಳಿಗೆ ಪೆಪ್ಸಿ ಹಾಗೂ ಕೋಕ ಕೋಲ ಕಂಪೆನಿಗಳ ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂದು ಹೇಳಿದೆ.
‘‘ನಮ್ಮ ಸಂಘಟನೆಯಲ್ಲಿ 15 ಲಕ್ಷಕ್ಕೂ ಅಧಿಕ ಸದಸ್ಯರಿದ್ದು ಅವರೆಲ್ಲರಿಗೂ ಪೆಪ್ಸಿ ಹಾಗೂ ಕೋಕ ಕೋಲ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಹೇಳಿದ್ದೇವೆ,’’ ಎಂದು ತಮಿಳು ನಾಡು ವನಿಗರ್ ಸಂಘಂ ಅಧ್ಯಕ್ಷ ವಿಕ್ರಮ್ ರಾಜ ಹೇಳಿದ್ದಾರೆ. ಈ ಸಂಘಟನೆ ಹೊರತಾಗಿ ತಮಿಳುನಾಡು ಟ್ರೇಡರ್ಸ್ ಫೆಡರೇಶನ್ ಕೂಡ ಇದೇ ಘೋಷಣೆ ಮಾಡಿದೆ.‘‘ಇದೊಂದು ನಿಷೇಧವಲ್ಲ. ಬದಲಾಗಿ ನಾವು ಆ ಕಂಪೆನಿಗಳ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸದಸ್ಯರಿಗೆ ಹೇಳಿದ್ದೇವೆ ಅಷ್ಟೇ,’’ ಎಂದು ಫೆಡರೇಶನ್ ಅಧ್ಯಕ್ಷ ವೆಲ್ಲಯ್ಯನ್‌ಹೇಳಿದ್ದಾರೆ.
ಈ ಫೆಡರೇಶನ್ ಅಧೀನದಲ್ಲಿ ಸುಮಾರು 6000 ಸಣ್ಣ ಸಂಘಟನೆಗಳಿದ್ದು ಮೇಲಿನೆರಡು ಕಂಪೆನಿಗಳ ಯಾವೊಂದು ಉತ್ಪನ್ನವನ್ನೂ ಮಾರಾಟ ಮಾಡದಂತೆ ಅದು ಎಲ್ಲಾ ಸದಸ್ಯರಿಗೆ ತಾಕೀತು ಮಾಡಿದೆ. ‘‘ನಮಗೆ ಯಾವುದೇ ಉತ್ಪನ್ನಗಳನ್ನು ನಿಷೇಧಿಸುವ ಅಧಿಕಾರವಿಲ್ಲದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಉತ್ಪನ್ನಗಳನ್ನು ನಿಷೇಧಿಸುವುದು ಸರಕಾರದ ಕರ್ತವ್ಯ. ಆದರೆ ಸರಕಾರ ಈ ಕ್ರಮ ಕೈಗೊಳ್ಳದೇ ಇರುವುದರಿಂದ ನಾವುಈ ಬಗ್ಗೆ ತೀರ್ಮಾನಿಸಿದ್ದೇವೆ,’’ ಎಂದು ವೆಲ್ಲಯ್ಯನ್ ಹೇಳಿದ್ದಾರೆ.
ಚೆನ್ನೈನ ಮರೀನಾ ಬೀಚಿನಲ್ಲಿ ಇತ್ತೀಚೆಗೆ ಜಲ್ಲಿಕಟ್ಟು ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪ್ರತಿಭಟನಾಕಾರರು ಈ ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಬೇಡಿಕೆಯಿಟ್ಟಿದ್ದರು.
ಈ ಎರಡು ಸಂಘಟನೆಗಳ ಕರೆಯಂತೆ ಅವುಗಳ ಸದಸ್ಯರು ಪೆಪ್ಸಿ, ಕೋಕ ಕೋಲ ಉತ್ಪನ್ನಗಳ ಮಾರಾಟ ನಿಲ್ಲಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.