ಗಂಗಾ ನದಿ ಶುದ್ದೀಕರಣ ಅರ್ಜಿಯನ್ನು ಎನ್ ಜಿಟಿಗೆ ವರ್ಗಾಯಿಸಿದ ಸುಪ್ರೀಂ
ಹೊಸದಿಲ್ಲಿ, ಜ.25: ಸುಪ್ರೀಂ ಕೋರ್ಟ್ ಗಂಗಾ ನದಿಯನ್ನು ಶುದ್ಧೀಕರಿಸುವ 32 ವರ್ಷಗಳ ಹಿಂದಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಶನಲ್ ಗ್ರೀನ್ ಟ್ರಿಬ್ಯುನಲ್ (ಎನ್ ಜಿಟಿ) ಗೆ ವರ್ಗಾಯಿಸಿದೆ.
ಗಂಗಾ ನದಿಗೆ ಪೌರಾಡಳಿತ ಸಂಸ್ಥೆಗಳ ಘನ ತಾಜ್ಯ ಮತ್ತು ಕೈಗಾರಿಕೆಗಳ ತ್ಯಾಜ್ಯವನ್ನು ಗಂಗಾನದಿಗೆ ಹರಿಯ ಬಿಟ್ಟು ಗಂಗಾನದಿಯನ್ನು ಮಲೀನಗೊಳಿಸುವ ಪ್ರಕರಣದ ಬಗ್ಗೆ ಎನ್ ಜಿಟಿ 2014ರಿಂದ ವಿಚಾರಣೆ ನಡೆಸುತ್ತಿದ್ದು, ಈ ಕಾರಣದಿಂದಾಗಿ ಗಂಗಾನದಿಯ ಶುದ್ಧೀಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಎನ್ ಜಿಟಿಗೆ ವರ್ಗಾಯಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹಾರ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟರು.
ಗ್ರೀನ್ ಟ್ರಿಬ್ಯುನಲ್ ಪ್ರತಿ ಆರು ತಿಂಗಳಿಗೊಮ್ಮೆ ವಿಚಾರಣೆಯ ಪ್ರಗತಿಯನ್ನು ಸುಪ್ರೀಂ ಕೋರ್ಟ್ ಗೆ ನೀಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಕೀಲರಾದ ಎಂಸಿ ಮೆಹ್ತಾ 1985ರಲ್ಲಿ ಗಂಗಾನದಿಯ ಶುದ್ಧೀಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸಿದ್ದರು.