ಹೃತಿಕ್ ಕಾಬಿಲ್ ಎ ತಾರೀಫ್ ನಟನೆಯೇ ಹೈಲೈಟ್
ದೃಷ್ಟಿಹೀನ ಜೋಡಿ ರೋಹನ್ ಭಟ್ನಾಗರ್ (ಹೃತಿಕ್) ಸುಪ್ರಿಯಾ ಶರ್ಮ (ಯಾಮಿ) ಪ್ರೀತಿಸಿ ಮದುವೆಯಾಗಿ ಒಬ್ಬರಿಗೊಬ್ಬರು ಬೆಳಕಾಗುತ್ತಾರೆ. ಆದರೆ ಸುಪ್ರಿಯಾ ಅತ್ಯಾಚಾರಕ್ಕೊಳಗಾಗಿ ಪೊಲೀಸರು ಪ್ರಕರಣದ ತನಿಖೆ ವಿಳಂಬಿಸಿದಾಗ ಅವರ ಸಂತಸದ ಜಗತ್ತೆಲ್ಲಾ ತಲೆಕೆಳಗಾಗಿ ಬಿಡುತ್ತದೆ ಹಾಗೂ ರೋಹನ್ ಅನಿವಾರ್ಯವಾಗಿ ಕಾನೂನು ಕೈಗೆತ್ತಿಕೊಳ್ಳುತ್ತಾನೆ.
ಅಂಧ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಹೋರಾಡುವ ಸಲುವಾಗಿ ತನ್ನ ಪತ್ನಿಯ ಮಾನಹರಣ ಮಾಡಿದವರ ವಿರುದ್ಧ ಸೇಡು ತೀರಿಸುವ ಕಥೆಯಿರುವ ಈ ಚಿತ್ರ 1989ರಲ್ಲಿ ತೆರೆಕಂಡ ಹಾಲಿವುಡ್ಡಿನ 'ಬ್ಲೈಂಡ್ ಫ್ಯೂರಿ' ಯಿಂದ ಪ್ರೇರಿತವಾಗಿದೆ.
ಚಿತ್ರದಲ್ಲಿ ರೋಹನ್ ಒಬ್ಬ ವೃತ್ತಿಪರ ಡಬ್ಬಿಂಗ್ ಕಲಾವಿದನಾಗಿದ್ದರೆ, ಸುಪ್ರಿಯಾ ಪಿಯಾನೋ ವಾದಕಿಯಾಗಿದ್ದಾರೆ. ಅವರಿಬ್ಬರ ಜೋಡಿ ಅನುರೂಪವೆಂದೆನಿಸುತ್ತದೆ. ಒಂದು ದಿನ ಸುಪ್ರಿಯಾ ಅಮಿತ್ ಶೆಲ್ಲರ್ (ರೋಹಿತ್ ರಾಯ್) ಹಾಗೂ ಆತನ ಗೆಳೆಯ ವಾಸಿಂ (ಸಹಿದುರ್ ರಹಮಾನ್) ಅವರಿಂದ ಅತ್ಯಾಚಾರಕ್ಕೊಳಗಾದಾಗ ರೋಹನ್ ಬದುಕು ಮತ್ತಷ್ಟು ಅಂಧಕಾರದಲ್ಲಿ ಮುಳುಗುತ್ತದೆ. ಅತ್ಯಾಚಾರಿ ಅಮಿತ್ ಸ್ಥಳೀಯ ಕಾರ್ಪೊರೇಟರ್ ಮಾಧವರಾವ್ ಶೆಲ್ಲರ್ (ರೊನಿತ್ ರಾಯ್) ಸಹೋದರನಾಗಿರುವುದರಿಂದ ಭ್ರಷ್ಟ ಪೊಲೀಸ್ ಅಧಿಕಾರಿಗಳಾದ ನರೇಂದ್ರ ಝಾ ಹಾಗೂ ಗಿರೀಶ್ ಕುಲಕರ್ಣಿ ತನಿಖೆಯನ್ನು ವಿಳಂಬಿಸುತ್ತಾರೆ. ಅವಮಾನ ಸಹಿಸದೇ ಹೋದಾಗ ಸುಪ್ರಿಯಾ ಒತ್ತಡಕ್ಕೆ ಮಣಿಯುತ್ತಾಳೆ. ಆಗ ರೋಹನ್ ಸೇಡು ತೀರಿಸುವ ಪಣ ತೊಡುತ್ತಾನೆ.
ಚಿತ್ರದಲ್ಲಿ ಹೃತಿಕ್ ಅವರ ಅಭಿನಯ ಅಮೋಘವಾಗಿದ್ದು ಅವರ ಎಲ್ಲಾ ಚಿತ್ರಗಳಿಗಿಂತಲೂ ಈ ಚಿತ್ರದಲ್ಲಿನ ಅವರ ಅಭಿನಯ ಪ್ರಭಾವಶಾಲಿಯಾಗಿದೆ. ಒಬ್ಬ ಪ್ರೇಮಿಯಾಗಿ ಕೊನೆಗೆ ಒಂದು ಕಿಲ್ಲಿಂಗ್ ಮಶೀನ್ ಆಗಿ ಹೃತಿಕ್ ತಮ್ಮ ಅಭಿನಯ ಚಾತುರ್ಯ ಮೆರೆದಿದ್ದಾರೆ. ಯಾಮಿ ಕೂಡ ಉತ್ತಮ ಅಭಿನಯ ನೀಡಿದ್ದಾರೆ.