ಬಾವಿಯಲ್ಲಿ ಮಾಜಿ ಶಾಸಕ ಸಿ.ಟಿ ಅಹ್ಮದಾಲಿ ಸಂಬಂಧಿಕನ ಶವ ಪತ್ತೆ !
ಮಂಜೇಶ್ವರ,ಜ.26: ಪೈವಳಿಕೆ ಬಾಯಾರಿನಲ್ಲಿ ಬುಧವಾರ ಸಂಜೆ ಬಾವಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಗುರುತು ಸಿಕ್ಕಿದೆ. ಕಾಸರಗೋಡು ವಿದ್ಯಾನಗರ್ ಚೆಟ್ಟುಂಕುಯಿಯ ಮುಹಮ್ಮದ್ ಮನ್ಸೂರ್ ಕೊಲೆಯಾದ ವ್ಯಕ್ತಿ. ಇವರು ಹಾಗೂ ಲೀಗ್ ನಾಯಕ ಕಾಸರಗೋಡು ಮಾಜಿ ಶಾಸಕ ಸಿ.ಟಿ. ಅಹ್ಮದ್ ಅಲಿಯವರ ಅಳಿಯನ ಸಹೋದರ ಎಂದು ತಿಳಿದು ಬಂದಿದೆ.
ಬಾಯಾರ್ ಮುಳಿಗದ್ದೆಯಿಂದ ಎರಡು ಕಿಲೊಮೀಟರ್ ದೂರ ಎಡಂಬಳ ಚಕ್ಕರೆಗುಳಿಯ ಜನವಾಸವಿಲ್ಲದ ಪ್ರದೇಶದಲ್ಲಿ ಮನ್ಸೂರ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಥಳದಲ್ಲಿ ಸಂಜೆವೇಳೆ ಕೆಲವರು ಬೊಬ್ಬೆ ಗಲಾಟೆ ಹೊಡೆದಿರುವುದನ್ನು ನಾವು ಕೇಳಿದ್ದೇವೆಂದು ಊರವರು ಹೇಳಿದ್ದಾರೆ. ಜನರೇ ಶಂಕೆಗೊಂಡು ಅತ್ತ ಹೋಗಿ ನೋಡಿದಾಗ ಮೃತದೇಹ ಕಂಡು ಬಂದಿತ್ತು.
ಮೃತದೇಹದಿಂದ ರಕ್ತ ಹರಿಯುತ್ತಿತ್ತು. ಕುಂಬಳೆ ಸರ್ಕಲ್ ಇನ್ಸ್‌ಪೆಕ್ಟರ್ ವಿ.ವಿ.ಮನೋಜ್‌ಕುಮಾರ್, ಮಂಜೇಶ್ವರಂ ಎಸ್ಸೈ ಪ್ರಮೋದ್ ನೇತೃತ್ವದ ಪೊಲೀಸರು ಹುಡುಕಾಟ ನಡೆಸಿದಾಗ ಶವ ಪತ್ತೆಯಾದ ಬಾವಿಯ ಸಮೀಪವೇ ಮೆಣಸಿನ ಹುಡಿ ಇರುವುದು ಕಂಡು ಬಂದಿತ್ತು. ಓಮ್ನಿ ವ್ಯಾನ್‌ನ ಗಾಜು ಪುಡಿಯಾಗಿರುವುದು ಕೂಡಾ ಕಂಡು ಬಂದಿದೆಎಂದು ವರದಿ ತಿಳಿಸಿದೆ.