×
Ad

ರಾಜಭವನವನ್ನೇ ’ಲೇಡೀಸ್ ಕ್ಲಬ್’ ಮಾಡಿದ ಆರೋಪ: ರಾಜ್ಯಪಾಲ ರಾಜೀನಾಮೆ

Update: 2017-01-26 23:10 IST

ಶಿಲ್ಲಾಂಗ್, ಜ.27: ರಾಜಮರ್ಯಾದೆಯನ್ನು ಹರಾಜು ಹಾಕಿ ಇಡೀ ರಾಜಭವನವನ್ನೇ ’ಲೇಡಿಸ್ ಕ್ಲಬ್’ ಮಾಡಿಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಮೇಘಾಲಯ ರಾಜ್ಯಪಾಲ ವಿ.ಷಣ್ಮುಖನಾಥನ್ ರಾಜೀನಾಮೆ ನೀಡಿದ್ದಾರೆ.

ರಾಜಭವನದ ಘನತೆ ವಿಚಾರದಲ್ಲಿ ಗಂಭೀರ ರಾಜಿ ಮಾಡಿಕೊಂಡಿರುವ ಬಗ್ಗೆ ರಾಜಭವನದ ಮಹಿಳಾ ಉದ್ಯೋಗಿಗಳು ಆರೋಪಿಸಿ, ರಾಜ್ಯಪಾಲರ ಉಚ್ಚಾಟನೆಗೆ ಆಗ್ರಹಿಸಿದ್ದರು. ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ, ಈ ಮಾಜಿ ಆರೆಸ್ಸೆಸ್ ನಾಯಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದನ್ನು ರಾಜಭವನ ದೃಢಪಡಿಸಿದೆ.

ರಾಜ್ಯಪಾಲರು ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವಾಲಯದ ನಿರ್ಧಾರಕ್ಕೆ ಕಾಯಲಾಗುತ್ತಿದೆ ಎಂದು ಇದಕ್ಕೂ ಮುನ್ನ ಕಾಂಗ್ರೆಸ್ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಹೇಳಿದ್ದರು. ರಾಜಭವನದ 100ಕ್ಕೂ ಹೆಚ್ಚು ಉದ್ಯೋಗಿಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ಹಾಗೂ ಗೃಹಸಚಿವರಿಗೆ ಪತ್ರ ಬರೆದು, ರಾಜಭವನದ ಘನತೆ ಉಳಿಸುವ ಸಲುವಾಗಿ ರಾಜ್ಯಪಾಲರನ್ನು ತಕ್ಷಣ ವಜಾ ಮಾಡಿ ಎಂದು ಆಗ್ರಹಿಸಿದ್ದರು. ರಾಜಭವನವನ್ನು ಷಣ್ಮುಗನಾಥನ್ ಯುವತಿಯರ ಕ್ಲಬ್ ಆಗಿ ಮಾರ್ಪಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

"ರಾಜ್ಯಪಾಲರ ನೇರ ಆದೇಶದ ಅನ್ವಯ ಹಲವು ಮಂದಿ ಯುವತಿಯರು ಬಂದು ಹೋಗುವ ಸ್ಥಳವಾಗಿ ಇದು ಮಾರ್ಪಟ್ಟಿದೆ. ಹಲವು ಮಂದಿಗೆ ಅವರ ಬೆಡ್‌ರೂಂಗೆ ಕೂಡಾ ನೇರ ಪ್ರವೇಶವಿತ್ತು" ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಮಾಜಿ ಆರೆಸ್ಸೆಸ್ ನಾಯಕರಾಗಿದ್ದ ಷಣ್ಮುಗನಾಥನ್, 2015ರ ಮೇ ತಿಂಗಳಿನಿಂದ ಈ ಹುದ್ದೆಯಲ್ಲಿದ್ದು, ಕಳೆದ ವರ್ಷದಿಂದ ಮಣಿಪುರದ ಉಸ್ತುವಾರಿಯನ್ನೂ ಹೊಂದಿದ್ದಾರೆ. ಗುರುವಾರ ಅರುಣಾಚಲ ಪ್ರದೇಶದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಸಿವಿಲ್ ಸೊಸೈಟಿ ವುಮೆನ್ ಆರ್ಗನೈಸೇಷನ್, ತ್ಮಾ ಯು ರಂಗ್ಲಿಯಂಥ ಮಹಿಳಾ ಹಕ್ಕುಗಳ ಸಂಘಟನೆಗಳು ಕೂಡಾ ರಾಜ್ಯಪಾಲರ ನಡತೆ ಆಕ್ಷೇಪಿಸಿ, ಅವರ ವಜಾಗೆ ಸಹಿ ಅಭಿಯಾನ ಆರಂಭಿಸಿದ್ದವು. ರಾಜಭವನದಲ್ಲಿ ಉದ್ಯೋಗ ಸಂದರ್ಶನಕ್ಕಾಗಿ ಆಗಮಿಸಿದ್ದ ಮಹಿಳೆಯೊಬ್ಬರು ಕೂಡಾ ರಾಜ್ಯಪಾಲರ ವರ್ತನೆ ಬಗ್ಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News