ದಿಲ್ಲಿಯಲ್ಲಿ ಶತಮಾನದ ದಾಖಲೆ ನಿರ್ಮಿಸಿದ ಮಳೆ
ಹೊಸದಿಲ್ಲಿ ಜ.27: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಳೆ ಸುರಿಯಲಿಲ್ಲ. ಆದರೆ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಬಳಿಕ ರಾಜಧಾನಿಯಲ್ಲಿ ಧಾರಾಕಾರ ಮಳೆ ಸುರಿಯಿತು. ಗುರುವಾರ ದಿಲ್ಲಿಯಲ್ಲಿ 24 ಮಿಲಿಮೀಟರ್ ಮಳೆ ಸುರಿಯುವುದರೊಂದಿಗೆ ಜನವರಿ ತಿಂಗಳಲ್ಲಿ ಬಿದ್ದ ಶತಮಾನದ ಗರಿಷ್ಠ ಮಳೆಯ ದಾಖಲೆ ಕೊಚ್ಚಿಹೋಯಿತು.
ರಾಜಧಾನಿಯಲ್ಲಿ ಜನವರಿಯಲ್ಲಿ ಅತಿಹೆಚ್ಚು ಮಳೆ ಬಿದ್ದಿರುವ ಪ್ರಮಾಣ ಇದಾಗಿದೆ. ಬೆಳಗ್ಗೆ 8:30ರಿಂದ ಸಂಜೆ 5:30ರ ಅವಧಿಯಲ್ಲಿ 23.7 ಮಿಲಿಮೀಟರ್ ಮಳೆ ಸಫ್ದರ್‌ಜಂಗ್‌ನಲ್ಲಿ ಬಿದ್ದಿದ್ದು, ಈ ಹಿಂದೆ ಗರಿಷ್ಠ ಎಂದರೆ, 2013ರ ಜನವರಿ 18ರಂದು 21 ಮಿಲಿಮೀಟರ್ ಮಳೆ ದಾಖಲಾಗಿತ್ತು.
ಇಡೀ ಉತ್ತರ ಭಾರತದಲ್ಲಿ ವ್ಯಾಪಕ ಮಳೆ ಬಿದ್ದಿದ್ದು, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಹಿಮಪಾತವಾದ ವರದಿಗಳು ಬಂದಿವೆ. ಹಿಸ್ಸಾರ್, ಜಲಂಧರ್, ಕಪುರ್ತಾಲ, ಪಂಜಾಬ್ ಹಾಗೂ ಹರ್ಯಾಣದ ವಿವಿಧೆಡೆ ಕೂಡಾ ವ್ಯಾಪಕ ಪ್ರಮಾಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
"ಇದು ಸಕ್ರಿಯ ಪಶ್ಚಿಮ ವ್ಯತ್ಯಯದ ಪರಿಣಾಮವಾಗಿದ್ದು, ರಾಜಸ್ಥಾನ ಮತ್ತು ವಾಯವ್ಯ ರಾಜ್ಯಗಳು ದೊಡ್ಡ ಪ್ರಮಾಣದಲ್ಲಿ ತೇವಾಂಶ ಹೀರಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರಿ ಮಳೆಯಾಗಿದೆ" ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ರವೀಂದರ್ ವಿಶೆನ್ ಹೇಳಿದ್ದಾರೆ.