ಕಾಲೇಜು ವಿದ್ಯಾರ್ಥಿನಿಯ ಕೈಮುರಿದ ಸಹಪಾಠಿಗಳು
ಎರ್ನಾಕುಲಂ,ಜ.27: ಸೈಂಟ್ ತೆರೆಸಾಸ್ ಕಾಲೇಜಿನಲ್ಲಿ ಸಹಪಾಠಿಗಳ ಹೊಡೆತಕ್ಕೊಳಗಾದ ವಿದ್ಯಾರ್ಥಿನಿಯೊಬ್ಬಳ ಕೈಮುರಿದು ಹೋಗಿದೆ. ಒಂದನೆ ವರ್ಷ ಬಿಸಿಎ ವಿದ್ಯಾರ್ಥಿನಿ ಹೈಸಲ್ ರಜನೀಶ್‌ಗೆ ಸಹಪಾಠಿಗಳು ಮಾರಕವಾಗಿ ಹೊಡೆದು ಕೈಮುರಿದು ಹಾಕಿದ್ದಾರೆ. ಕಾಲೇಜಿನಲ್ಲಿ ಜೊತೆ ಕಲಿಯುವ ಮರಿಯಾ ಶಾಜಿ, ಮರಿಯಾ ಲಿಯಾಂಡ್ರೊ, ಡೈಸಿ ಜೇಮ್ಸ್ ಸೇರಿ ಹೈಸಲ್‌ಳನ್ನು ಹೊಡೆದಿದ್ದು , ಹೈಸಲ್‌ಳ ಬಲಗೈಗೆ ಮುರಿತವಾಗಿದೆ.
ಹೈಸಲ್‌ಳ ಫೋನ್‌ಗೆ ಮರಿಯಾ ಶಾಜಿಯ ಸಹೋದರ ಅಲ್ವಿನ್‌ನ ಗೆಳೆಯ ಜೋಸ್ ಮ್ಯಾಥ್ಯೂ ನಿರಂತರ ಫೋನ್ ಸಂದೇಶ ಕಳುಹಿಸಿದ್ದ. ಇದನ್ನು ಪ್ರಶ್ನಿಸಿ ಮೂವರು ವಿದ್ಯಾರ್ಥಿನಿಯರು ಹೈಸಲ್‌ಳಿಗೆ ಹೊಡೆದು ಕೈಮುರಿಯುವಂತೆ ಮಾಡಿದ್ದಾರೆ.ವಿದ್ಯಾರ್ಥಿನಿಯರಲ್ಲಿ ಒಬ್ಬಳು ಕೈ ತಿರುಚಿದ್ದಾಳೆ ಮತ್ತು ಇನ್ನೊಬ್ಬಳು ಕುತ್ತಿಗೆಗೆ ಹೊಡೆದಿದ್ದಾಳೆಂದು ಹೈಸಲ್ ತಿಳಿಸಿದ್ದು, ಘಟನೆಗೆ ಸಂಬಂಧಪಟ್ಟ ಮೂವರು ಆರೋಪಿ ವಿದ್ಯಾರ್ಥಿನಿಯರು ಹಾಗೂ ಓರ್ವ ಕಾಲೇಜಿನ ಹೊರಗಿನ ವ್ಯಕ್ತಿ ವಿರುದ್ಧ ಎರ್ನಾಕುಲಂ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆಂದು ವರದಿತಿಳಿಸಿದೆ.