ಜಲ್ಲಿಕಟ್ಟುಗೆ ಬೆದರಿದ ಸಿಂಗಂ 3
ಸೂರ್ಯ ಅಭಿನಯದ ‘ಸಿಂಗಂ’ ತಮಿಳಿನಲ್ಲಿ ಸಖತ್ ಕ್ರೇಝ್ ಸೃಷ್ಟಿಸಿದ ಚಿತ್ರ. ಪರಭಾಷಾ ಪ್ರೇಕ್ಷಕರನ್ನೂ ಮೋಡಿ ಮಾಡಿದ ಈ ಚಿತ್ರ ಬಾಲಿವುಡ್‌ಗೆ ರಿಮೇಕ್ ಆಗಿ ಗಲ್ಲಾಪೆಟ್ಟಿಗೆಯನ್ನು ಸೂರೆ ಹೊಡೆದಿತ್ತು. ಸೂರ್ಯ ಅಭಿಯನದ ‘ಸಿಂಗಂ 2’ ಕೂಡಾ ಪ್ರೇಕ್ಷಕರ ಭರ್ಜರಿ ಮೆಚ್ಚುಗೆ ಗಳಿಸಿತ್ತು. ಈ ಚಿತ್ರಗಳ ಮುಂದುವರಿದ ಭಾಗ ‘ಸಿಂಗಂ 3’, ಜನವರಿ 26ರಂದು ತೆರೆಯಲ್ಲಿ ಗರ್ಜಿಸಬೇಕಿತ್ತು. ಆದರೆ ಜಲ್ಲಿಕಟ್ಟು ನಿಷೇಧದ ವಿರುದ್ಧ ತಮಿಳುನಾಡಿನಲ್ಲಿ ಕಳೆದ ವಾರ ಪ್ರತಿಭಟನೆ ಭುಗಿಲೆದ್ದ ಕಾರಣ, ನಿರ್ಮಾಪಕರು ಚಿತ್ರದ ಬಿಡುಗಡೆಯನ್ನು ಕೊಂಚ ಮುಂದೂಡಿದ್ದಾರೆ.
ತಮಿಳುನಾಡಿನಲ್ಲಿ ಪರಿಸ್ಥಿತಿ ಸಹಜತೆಯೆಡೆಗೆ ಮರಳಿದ ಬಳಿಕ ‘ಸಿಂಗಂ 3’ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಪ್ರಕಟಿಸಲಿದ್ದಾರೆ. ಹಾಗೆ ನೋಡಿದರೆ ಸಿಂಗಂ3 ಬಿಡುಗಡೆ ಮುಂದೆ ಹೋಗಿರುವುದು ಇದು ಎರಡನೆ ಸಲವಾಗಿದೆ. ಅಂದರೆ, ಕಳೆದ ವರ್ಷ ಡಿಸೆಂಬರ್ 16ರಂದು ಚಿತ್ರ ಬಿಡುಗಡೆಗೊಳ್ಳುವ ನಿರೀಕ್ಷೆಯಿತ್ತು. ಆದರೆ ತಮಿಳುನಾಡಿನಲ್ಲಿ ವಾರ್ಧಾ ಚಂಡಮಾರುತದ ಹಾವಳಿಯ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಜನವರಿ 26ಕ್ಕೆ ಮುಂದೂಡಲಾಗಿತ್ತು. ಒಟ್ಟಿನಲ್ಲಿ ‘ಸಿಂಗಂ 3’ ಆಗಮನ ವಿಳಂಬವಾಗಿರುವುದು ಸೂರ್ಯ ಅಭಿಮಾನಿಗಳಿಗೆ ನಿರಾಶೆಯುಂಟು ಮಾಡಿದೆ
ಅದೇನೇ ಇದ್ದರೂ ‘ಸಿಂಗಂ3’ ಬಿಡುಗಡೆ ಮುಂದೂಡಲ್ಪಟ್ಟಿರುವುದು, ಈ ವಾರ ತೆರೆಕಂಡ ಬಾಲಿವುಡ್ ಚಿತ್ರ ಗಳಾದ ರಯೀಸ್ ಹಾಗೂ ಕಾಬಿಲ್‌ಗೆ ಪ್ರಯೋಜನವಾಗಿದೆ. ಇಲ್ಲದಿದ್ದಲ್ಲಿ ಈ ಎರಡೂ ಚಿತ್ರಗಳು ದಕ್ಷಿಣದ ರಾಜ್ಯಗಳಲ್ಲಿ ಸಿಂಗಂ 3ನೊಂದಿಗೆ ಪ್ರಬಲವಾದ ಪೈಪೋಟಿಯನ್ನೆದುರಿಸಬೇಕಾಗುತ್ತಿತ್ತು.
ಹರಿ ನಿರ್ದೇಶನದ ಸಿಂಗಂ 3ನಲ್ಲಿ ಸೂರ್ಯನಿಗೆ ನಾಯಕಿಯರಾಗಿ ಶ್ರುತಿ ಹಾಸನ್, ಅನುಷ್ಕಾ ಶೆಟ್ಟಿ ನಟಿಸಿದ್ದಾರೆ.