1 ಸಾವಿರ ಕೋಟಿ ರೂ. ಕ್ಲಬ್ ಗೆ ದಂಗಲ್?
ಬಾಕ್ಸ್ ಆಫೀಸ್‌ನಲ್ಲಿ ಆಮೀರ್ ಖಾನ್ ಅಭಿನಯದ ‘ದಂಗಲ್’ನ ನಾಗಾಲೋಟಕ್ಕೆ ತಡೆಯೇ ಇಲ್ಲದಂತಾಗಿದೆ. ಡಿಸೆಂಬರ್ 23ರಂದು ತೆರೆಕಂಡ ಈ ಚಿತ್ರವು ಪ್ರದರ್ಶನಗೊಂಡ ಎಲ್ಲಾ ಕಡೆಗಳಲ್ಲೂ ತನ್ನ ಗೆಲುವಿನ ಪಯಣವನ್ನು ಮುಂದುವರಿಸಿದೆ.
ದೇಶವಿದೇಶಗಳಲ್ಲಿ ಭರ್ಜರಿ ಜಯಭೇರಿ ಬಾರಿಸುತ್ತಿರುವ ಈ ಚಿತ್ರದ ಒಟ್ಟು ಗಳಿಕೆ 725 ಕೋಟಿ ರೂ. ದಾಟಿದೆ. ಬಾಕ್ಸ್ ಆಫೀಸ್‌ನಲ್ಲಿ ದಂಗಲ್‌ನ ಭರ್ಜರಿ ಓಟ ಹೀಗೆ ಮುಂದುವರಿದಲ್ಲಿ, ಶೀಘ್ರದಲ್ಲೇ ಅದರ ಗಳಿಕೆ 1 ಸಾವಿರ ಕೋಟಿ ತಲುಪಿದರೂ ಅಚ್ಚರಿಯಿಲ್ಲವೆಂದು ಚಿತ್ರೋದ್ಯಮ ಪಂಡಿತರು ಲೆಕ್ಕಹಾಕುತ್ತಿದ್ದಾರೆ.
ಖ್ಯಾತ ಕುಸ್ತಿಪಟು ಮಹಾವೀರ್ ಪೋಗಟ್, ಸಾಮಾಜಿಕ ಅಡೆತಡೆಗಳ ನಡುವೆಯೂ ತನ್ನ ಇಬ್ಬರು ಪುತ್ರಿಯರನ್ನು ಕುಸ್ತಿ ತಾರೆಯರನ್ನಾಗಿ ಬೆಳೆಸುವ ಹೃದಯಂಗಮ ಕಥಾನಕವನ್ನು ಹೊಂದಿರುವ ಈ ಚಿತ್ರವು ಭಾರತವೊಂದರಲ್ಲೇ ಕಳೆದ ವಾರದವರೆಗೆ 381.07 ಕೋಟಿ ರೂ. ಸಂಪಾದಿಸಿದೆ. ಫಾತಿಮಾ ಸನಾ ಶೇಖ್, ಸಾನ್ಯ ಮಲ್ಹೋತ್ರಾ ಹಾಗೂ ಸಾಕ್ಷಿ ತನ್ವರ್ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವು ಈಗಲೂ ದೇಶಾದ್ಯಂತ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆುನ್ನು ಸೃಷ್ಟಿಸುವ ಸನ್ನಾಹದಲ್ಲಿದೆ.
ಆದರೆ ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳಾದ ‘ರಯೀಸ್’ ಹಾಗೂ ‘ಕಾಬಿಲ್’ನ ಬಿಡುಗಡೆಯು ದಂಗಲ್‌ನ ಗಳಿಕೆಯ ಮೇಲೆ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.