ಶಿವಣ್ಣ-ಕಿಚ್ಚ ಜೋಡಿಯ ‘ವಿಲನ್’ಗೆ ಚಾಲನೆ
‘ಜೋಗಿ’ ಖ್ಯಾತಿಯ ಪ್ರೇಮ್ ನಿರ್ದೇಶನದ ‘ವಿಲನ್’ ನಾನಾ ಕಾರಣಗಳಿಂದಾಗಿ ಸುದ್ದಿ ಮಾಡುತ್ತಿದೆ. ಬರೋಬ್ಬರಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸ್ಯಾಂಡಲ್‌ವುಡ್ ಅತ್ಯಂತ ದುಬಾರಿ ಬಜೆಟ್‌ನ ಚಿತ್ರವೆಂಬ ಹೆಗ್ಗಳಿಕೆ ಹೊಂದಿರುವ ‘ವಿಲನ್’ನಲ್ಲಿ ಕನ್ನಡದ ಸೂಪರ್‌ಸ್ಟಾರ್‌ಗಳಾದ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಜೊತೆಯಾಗಿ ಅಭಿನಯಿಸಲಿದ್ದಾರೆ.
ವಿಲನ್‌ನ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ನಾಲ್ಕೈದು ತಿಂಗಳು ಮೊದಲೇ ಆರಂಭಿಸಿದ್ದ ಪ್ರೇಮ್, ಈಗ ಶಿವರಾಜ್‌ಕುಮಾರ್ ಹಾಗೂ ಶ್ರುತಿ ಹರಿಹರನ್ ಅವರ ಅಭಿನಯದ ಟೀಸರ್ ದೃಶ್ಯಗಳ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ಶಿವರಾಜ್, ಸುದೀಪ್ ಹಾಗೂ ಪ್ರೇಮ್ ಕಾಂಬಿನೇಶನ್‌ನ ಈ ಚಿತ್ರದಲ್ಲಿ ನಟಿಸಲು ಅವಕಾಶ ದೊರೆತಿರುವುದು ಶ್ರುತಿ ಹರಿಹರನ್‌ಗೆ ತುಂಬಾ ಖುಷಿತಂದಿದೆ. ಚಿತ್ರದಲ್ಲಿ ತನ್ನ ಪಾತ್ರ ಸಣ್ಣದಾದರೂ ಅತ್ಯಂತ ಮಹತ್ವದ್ದೆಂದು ಅವರ ಅಂಬೋಣ. ಕಿಚ್ಚ ಸುದೀಪ್ ಹಾಗೂ ಇನ್ನೋರ್ವ ನಾಯಕಿಯನ್ನೊಳಗೊಂಡ ಇನ್ನೊಂದು ಟೀಸರ್‌ನ ಶೂಟಿಂಗ್ ಮುಂದಿನ ವಾರ ಚೆನ್ನೈನಲ್ಲಿ ನಡೆಯಲಿದೆಯೆಂದು ಪ್ರೇಮ್ ಹೇಳಿದ್ದಾರೆ.
ಅಂದ ಹಾಗೆ ವಿಲನ್‌ಗೆ, ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ನಾಯಕಿಯೆಂಬ ವದಂತಿಗಳು ಬಲವಾಗಿ ಕೇಳಿಬರುತ್ತಿವೆ. ತಮಿಳು ಹಾಗೂ ಹಿಂದಿಯಲ್ಲಿ ಕೆಲವು ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸುತ್ತಿರುವ ಆ್ಯಮಿ ‘ವಿಲನ್’ನಲ್ಲಿ ಕಿಚ್ಚ ಸುದೀಪ್‌ಗೆ ನಾಯಕಿಯಾಗಲಿದ್ದಾಳಂತೆ. ಆದಾಗ್ಯೂ ಪ್ರೇಮ್ ಈವರೆಗೆ ಇದನ್ನು ದೃಢೀಕರಿಸಿಲ್ಲ. ಏನೇ ಇದ್ದರೂ ಶೀಘ್ರದಲ್ಲೇ ಚಿತ್ರದ ನಾಯಕಿಯ ಬಗ್ಗೆ ಪೂರ್ಣ ವಿವರಗಳನ್ನು ನೀಡುವುದಾಗಿ ಪ್ರೇಮ್ ಹೇಳಿಕೊಂಡಿದ್ದಾರೆ.