ಆಸ್ಕರ್ ರೇಸ್ ನಲ್ಲಿ ‘ಲಾ ಲಾ ಲ್ಯಾಂಡ್’ ಅಚ್ಚರಿ!

Update: 2017-01-27 15:24 GMT

ಪ್ರತಿಷ್ಠಿತ ಆಸ್ಕರ್ ಪುರಸ್ಕಾರ ಘೋಷಣೆಗೆ ಕ್ಷಣಗಣನೆ ಆರಂಭಗೊಂಡಿದೆ. ‘ಲಾ ಲಾ ಲ್ಯಾಂಡ್’ ಎಂಬ ರೋಮ್ಯಾಂಟಿಕ್ ಕಥಾಚಿತ್ರವೊಂದು ಬರೋಬ್ಬರಿ 14 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳಿಗೆ ನಾಮಕರಣಗೊಳ್ಳುವ ಮೂಲಕ ಹಾಲಿವುಡ್‌ನಲ್ಲಿ ಅಚ್ಚರಿ ಮೂಡಿಸಿದೆ. ಶ್ರೇಷ್ಠ ಚಿತ್ರ, ಶ್ರೇಷ್ಠ ನಿರ್ದೇಶನ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಈ ಚಿತ್ರ ಆಸ್ಕರ್‌ಗೆ ನಾಮಕರಣಗೊಂಡಿದೆ. ಚಿತ್ರದ ನಾಯಕ ರಿಯಾನ್ ಗೋಸ್ಲಿಂಗ್ ಹಾಗೂ ನಾಯಕಿ ಎಮ್ಮಾ ಸ್ಟೋನ್ ಕೂಡಾ ಶ್ರೇಷ್ಠ ನಟ ಹಾಗೂ ಶ್ರೇಷ್ಠ ನಟಿ ವಿಭಾಗಗಳಲ್ಲಿ ನಾಮಕರಣಗೊಂಡಿದ್ದಾರೆ.

ಏನೇ ಇದ್ದರೂ ಈ ಸಲದ ಆಸ್ಕರ್ ಪ್ರಶಸ್ತಿಗಳಲ್ಲಿ ‘ಲಾ ಲಾ ಲ್ಯಾಂಡ್’ಗೆ ಸಿಂಹಪಾಲು ಖಚಿತವೆಂಬ ಮಾತು ಗಳು ಕೇಳಿಬರುತ್ತಿವೆ. 1959ರಲ್ಲಿ ‘ಈವ್’ ಹಾಗೂ 1997ರಲ್ಲಿ ‘ಟೈಟಾನಿಕ್’ 14 ವಿಭಾಗಗಳಲ್ಲಿ ಆಸ್ಕರ್‌ಗೆ ನಾಮಕರಣಗೊಂಡಿದ್ದವು. ಇದೀಗ ‘ಲಾ ಲಾ ಲ್ಯಾಂಡ್’ ಈ ಚಿತ್ರಗಳ ದಾಖಲೆಯನ್ನು ಸರಿಗಟ್ಟಿದೆ.

ಹಾಲಿವುಡ್‌ನಲ್ಲಿ ಅವಕಾಶ ಪಡೆಯಲು ಪರದಾಡುತ್ತಿರುವ ಇಬ್ಬರು ಕಲಾವಿದರ ನಡುವೆ ಪ್ರೇಮ ಅರಳುವ, ರಮ್ಯ ಕಥಾನಕವನ್ನು ಹೊಂದಿರುವ ಲಾ ಲಾ ಲ್ಯಾಂಡ್ ಚಿತ್ರವನ್ನು 32ರ ಹರೆಯದ ಡಾಮಿಯೆನ್ ಚಾಝೆಲ್ ನಿರ್ದೇಶಿಸಿದ್ದಾರೆ.

ಆಸ್ಕರ್ ಸ್ಪರ್ಧೆಯಲ್ಲಿ ತಲಾ ಎಂಟು ವಿಭಾಗಗಳಲ್ಲಿ ನಾಮಕರಣಗೊಂಡಿರುವ ವೈಜ್ಞಾನಿಕ ಥ್ರಿಲ್ಲರ್ ಕಥಾವಸ್ತುವಿನ ‘ಆರೈವಲ್’ ಹಾಗೂ ಭಾವನಾತ್ಮಕ ಕಥೆಯಿರುವ ‘ಮೂನ್‌ಲೈಟ್’ ಚಿತ್ರಗಳು ಲಾ ಲಾ ಲ್ಯಾಂಡ್‌ಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News