ಮೇಘಾಲಯ ರಾಜ್ಯಪಾಲರ ವಿರುದ್ಧ ಗಂಭೀರ ಆರೋಪ ಮಾಡಿದ ಮಹಿಳೆ
ಹೊಸದಿಲ್ಲಿ, ಜ.28: ಮೇಘಾಲಯದ ರಾಜಭವನವನ್ನು ಲೇಡೀಸ್ ಕ್ಲಬ್ ಆಗಿ ಪರಿವರ್ತಿಸಿದ್ದಾರೆ ಎಂಬ ಆರೋಪ ಹೊತ್ತ ನಂತರ ರಾಜೀನಾಮೆ ನೀಡಿರುವ 67 ವರ್ಷದರಾಜ್ಯಪಾಲ ವಿ.ಷಣ್ಮುಗನಾಥನ್ ವಿರುದ್ಧ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಎನ್ ಡಿಟಿವಿಗೆ ನೀಡಿದ ಕೈಬರಹದ ಹಾಗೂ ಸಹಿಯಿರುವ ಹೇಳಿಕೆಯಲ್ಲಿ ಯುವತಿ ತನ್ನನ್ನ ಷಣ್ಮುಗನಾಥನ್ ನವೆಂಬರ್ ತಿಂಗಳಲ್ಲಿ ನೌಕರಿಯೊಂದರ ಸಂದರ್ಶನಕ್ಕಾಗಿ ಕರೆದಿದ್ದರೆಂದು ಹೇಳಿದ್ದಾಳೆ. ‘‘ನಾನು ಅಲ್ಲಿಗೆ ಹೋದಾಗ ಅವರು ನನ್ನ ಖಾಸಗಿ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು, ಬಲವಂತವಾಗಿ ನನ್ನನ್ನು ಅಪ್ಪಿ ನನಗೆ ಮುತ್ತು ನೀಡಿದರು’’ ಎಂದು ಯುವತಿ ಹೇಳಿಕೆ ನೀಡಿದ್ದಾರೆ.
ಈ ಬೆಳವಣಿಗೆಯ ನಂತರವೇ ರಾಜಭವನದ 98 ಉದ್ಯೋಗಿಗಳು ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಷಣ್ಮುಗನಾಥನ್ ರಾಜಭವನದ ಘನತೆಗೆ ಧಕ್ಕೆ ತಂದಿದ್ದಾರೆ ಹಾಗೂ ಅದನ್ನು ಲೇಡೀಸ್ ಕ್ಲಬ್ ಆಗಿ ಪರಿತವರ್ತಿಸಿದ್ದಾರೆ ಎಂದು ಆರೋಪಿಸಿದ್ದರು.
ಷಣ್ಮುಗನಾಥನ್ ಅವರಿಂದ ಕೇಂದ್ರ ಕೂಡಲೇ ವಿವರಣೆ ಕೇಳಿತ್ತಾದರೂ ಈ ಬಗ್ಗೆ ಪತ್ರಿಕಾ ವರದಿಗಳು ಬಂದ ಕೂಡಲೇ ರಾಜ್ಯಪಾಲರು ರಾಜೀನಾಮೆಯ ಮೊರೆ ಹೋಗಿದ್ದಾರೆ. ರಾಜಭವನದ ಉದ್ಯೋಗಿಗಳು ತಮ್ಮ ಪತ್ರದಲ್ಲಿ ರಾಜ್ಯಪಾಲ ಕೇವಲ ಮಹಿಳಾ ಉದ್ಯೋಗಿಗಳನ್ನು ಮಾತ್ರ ನೇಮಿಸುತ್ತಿದ್ದರು ಹಾಗೂ ಹಲವು ಮಹಿಳೆಯರಿಗೆ ‘‘ಅವರ ಬೆಡ್ ರೂಮಿಗೆ ನೇರ ಪ್ರವೇಶಾವಕಾಶವಿತ್ತು’’ ಎಂದು ಆರೋಪಿಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಉಪ ಕಾರ್ಯದರ್ಶಿಯೊಬ್ಬರಿಗೆ ಅದೆಷ್ಟು ನೋವು ಹಾಗೂ ಅಪಮಾನವಾಗಿತ್ತೆಂದರೆ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದರು ಎಂದೂ ಪತ್ರದಲ್ಲಿ ವಿವರಿಸಲಾಗಿದೆ.