ಕುರಿಗಳೂ ಸಾರ್ ರಾಯಣ್ಣ ತಳಿ ಕುರಿಗಳು...

Update: 2017-01-29 05:57 GMT

ತಾನು ಸಾಕಿದ ರಾಯಣ್ಣ ಬ್ರಿಗೇಡ್ ತಳಿಯ ಕುರಿಗಳ ಜೊತೆಗೆ ದಿಲ್ಲಿ ವಿಮಾನ ಹತ್ತಿದ ಈಶ್ವರಪ್ಪ ಅವರು ವಾಪಾಸ್ ಖುಷಿಖುಷಿಯಾಗಿ ಮರಳಿದರು.

ಪತ್ರಕರ್ತ ಎಂಜಲು ಕಾಸಿಗೆ ಅಚ್ಚರಿಯೋ ಅಚ್ಚರಿ.

‘‘ಸಾರ್...ಕುರಿಗಳ ಜೊತೆಗೆ ಹೋದವರು ಈಗ ಬರಿಗೈಯಲ್ಲಿ ಬಂದಿದ್ದೀರಿ....ಕುರಿಗಳಿಲ್ಲದೇ ನನ್ನ ಬದುಕೇ ಇಲ್ಲ...ಕುರಿಗಳೇ ನನ್ನ ಜೀವ...ಎಂದಿದ್ದೀರಲ್ಲ ಸಾರ್...’’ ಕಾಸಿ ಕೇಳಿದ.

‘‘ನೋಡ್ರೀ... ನಾನು ತೆಗೆದುಕೊಂಡು ಹೋಗಿರುವ ಕುರಿಗಳನ್ನು ನೋಡಿ ಅಮಿತ್ ಶಾ ಅವರಿಗೆ ತುಂಬಾ ಖುಷಿಯಾಯಿತು...ಇಂತಹ ಮುದ್ದಾದ ಕುರಿಗಳನ್ನು ನಾನು ಜೀವಮಾನದಲ್ಲೇ ನೋಡಿಲ್ಲ. ನನಗೆ ಕೊಟ್ಟು ಬಿಡಿ ಈಶ್ವರಪ್ಪ ಎಂದು ಕೇಳಿದರು. ಪಕ್ಷಕ್ಕಾಗಿ ಅದೇನೇನೋ ತ್ಯಾಗ ಮಾಡಿದ್ದೇನೆ. ಇದೀಗ ಈ ಕುರಿಗಳನ್ನು ಅವರಿಗೆ ಕೊಟ್ಟು ಬಿಟ್ಟಿದ್ದೇನೆ....’’

‘‘ಸಾರ್...ಈ ಕುರಿಗಳಿಲ್ಲದೆ ನಾನು ಬದುಕುವುದೇ ಇಲ್ಲ ಎಂದಿದ್ದೀರಿ..ಆ ಕುರಿಗಳನ್ನು ಬಿಟ್ಟು ಬಂದರೆ ಮಾತ್ರ ಪಕ್ಷದೊಳಗೆ ಪ್ರವೇಶ ಎಂದಿದ್ದರಲ್ಲ ಸಾರ್...ಇದೀಗ ಈ ಕುರಿಗಳಿಗೆ ಯಾರು ಸಾರ್ ಗತಿ?’’ ಕಾಸಿ ಕೇಳಿದ.

‘‘ನೋಡ್ರೀ...ಅಂತಿಮವಾಗಿ ಕುರಿಗಳನ್ನು ಕುರುಬ ಸಾಕುವುದಾದರೂ ಯಾಕೆ? ಒಳ್ಳೆಯ ದರಗಳಿಗೆ ಮಾರುವುದಕ್ಕಾಗಿ ಅಲ್ಲವೇ? ನಾನು ಸಾಕಷ್ಟು ಮೇವುಗಳನ್ನು ಹಾಕಿ ಸಾಕಿರುವ ಕುರಿಗಳು ಕಣ್ರೀ...ಅದನ್ನು ಪುಕ್ಕಟೆಯಾಗಿ ನನಗೆ ಕೊಡಿ. ನಾನು ಮುಂದಿನ ಚುನಾವಣೆಯಲ್ಲಿ ಬಲಿಕೊಡುತ್ತೇನೆ ಎಂದು ಯಡಿಯೂರಪ್ಪ ಅವರು ಕೇಳಿದರೆ ನಾನು ಯಾಕೆ ಕೊಡಲಿ...?’’

 ‘‘ಹಾಗಲ್ಲ ಸಾರ್...ನಿಮ್ಮಲ್ಲಿ ಕುರಿಗಳೇ ಇರಲಿಲ್ಲವಂತೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಾಕಿದ ೆ ಕೆಲವು ಹಳೇ ಮುದಿ ಕುರಿಗಳನ್ನು ಮುಂದಿಟ್ಟುಕೊಂಡು ಯಡಿಯೂರಪ್ಪರ ಬಳಿ ವ್ಯಾಪಾರ ಮಾಡಲು ಹೊರಟಿದ್ದರಂತೆ...ಹೌದಾ?’’

 ‘‘ಯಾರ್ರೀ ಅದು ಹೇಳಿರೋದು. ಅವರ ನಾಲಗೆ ಕತ್ತರಿಸಿ ಬಿಡ್ತೇನೆ. ಸಿದ್ದರಾಮಯ್ಯ ಸಾಕಿರುವ ಕೆಲವು ಹಳೇ ಮುದಿ ಕುರಿಗಳು ಅಲ್ಲಿ ಇಲ್ಲಿ ಅಲೆದಾಡುತ್ತಿದ್ದು, ಬಂದು ನನ್ನ ದೊಡ್ಡಿಗೆ ಸೇರಿರಬಹುದು. ಅದಕ್ಕೆ ನಾನೇನು ಮಾಡಲಿ? ಹಾಗೆಂದು ನನ್ನದು ವಿಶೇಷ ತಳಿಯ ಕುರಿ. ಈ ಹಿಂದೆ ಕಿತ್ತೂರು ಚೆನ್ನಮ್ಮ ಅವರ ಆಳ್ವಿಕೆಯ ಕಾಲದಲ್ಲಿ ಲಿಂಗಾಯತರ ಹಿಂದೆ ಓಡಾಡುತ್ತಿದ್ದ ಕುರಿಗಳ ತಳಿಗಳನ್ನು ಹುಡುಕಿ, ಅದಕ್ಕೆ ಮೇವು ಹಾಕಿ ಸಾಕಿದ್ದೇನೆ...ಇಂತಹ ವಿಶೇಷ ಕುರಿಗಳು ಸಿದ್ದರಾಮಯ್ಯ ಬಳಿ ಇರಲಿಲ್ಲ. ಅವರು ಬರೇ ಹಾಸನದ ಕೆಲವು ಒಣಗಿದ ಕುರಿಗಳನ್ನು ಕಾಂಗ್ರೆಸ್‌ನ ಹೈಕಮಾಂಡಿಗೆ ಮಾರಿ ಏಮಾರಿಸಿದ್ದಾರೆ. ಅಂತಹ ನಕಲಿ ವ್ಯಾಪಾರಗಳೆಲ್ಲ ನನ್ನಲ್ಲಿಲ್ಲ. ನನ್ನದೇನಿದ್ದರೂ ಹೈಟೆಕ್ ಕುರಿಗಳ ವ್ಯಾಪಾರ. ಇದು ಬರೇ ರಾಯಣ್ಣ ತಳಿಯ ಕುರಿ ಮಾತ್ರ ಅಲ್ಲ...ೆ ಗೋಳ್ವಾಲ್ಕರ್ ಅವರನ್ನು ಕಸಿ ಮಾಡಿದ ಬಿಟಿ ಕುರಿಗಳು ಇವು....ಏಕಕಾಲದಲ್ಲಿ ಹಿಂದುಳಿದವರ್ಗಗಳ ಕುರಿಯೂ ಹೌದು, ಹಿಂದುತ್ವದ ಕುರಿಯೂ ಹೌದು...ಆದುದರಿಂದಲೇ ನಮ್ಮ ಕುರಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟವು. ಆರೆಸ್ಸೆಸ್‌ನೋರೂ ಈ ಕುರಿಗಳ ಬಗ್ಗೆ ವಿಶೇಷ ಆಸ್ಥೆ ವಹಿಸಿದರು....’’

‘‘ಹಾಗಲ್ಲ ಸಾರ್....ಈ ಕುರಿಗಳಿಗಾಗಿ ಜೀವವನ್ನೇ ಕೊಡ್ತೇನೆ ಅಂತಿದ್ರಿ...ಈಗ ಅದನ್ನು ಕೇಂದ್ರದ ವರಿಷ್ಠರ ಕೈಗೆ ಕೊಟ್ಟು ಬಂದಿದ್ದೀರಲ್ಲ...?’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡ್ರೀ...ಸಿಎಂ ಇಬ್ರಾಹೀಂ ಅಲ್ಪಸಂಖ್ಯಾತ ಕುರಿಗಳನ್ನು ಸಾಕಿ, ಕಾಂಗ್ರೆಸ್‌ನೋರ ಈದ್‌ಗೆ ಬಿರಿಯಾನಿ ಮಾಡಲು ಅದನ್ನು ಕೊಟ್ಟಾಗ ನೀವು ಎಲ್ಲಿದ್ದಿರಿ? ಸಿದ್ದರಾಮಯ್ಯ ಅವರು ಕುರಿಗಳನ್ನು ಸಾಕಿ ಅದನ್ನು ಕಾಂಗ್ರೆಸ್‌ನೋರಿಗೆ ಬಾಡೂಟ ಹಾಕಿದಾಗ ಪತ್ರಕರ್ತರು ಸುಮ್ಮನಿದ್ದಿರಿ. ಈಗ ನಾನು ಈ ಕುರಿಗಳನ್ನು ನಮ್ಮ ನಾಯಕರಿಗೆ ಮಾರಿದ್ರೆ ನಿಮಗ್ಯಾಕೆ ಹೊಟ್ಟೆ ಉರಿ?’’

‘‘ಅಲ್ಲ ಸಾರ್...ಕುರಿಗಳನ್ನು ಅಮಿತ್ ಶಾ ಅವರಿಗೆ ಮಾರಿದ್ರಿ ಎಂದು ಹೇಳುತ್ತಿದ್ದೀರಿ...ಆದರೆ ಅವರು ಮೂಲತಃ ಜೈನರು. ಸಸ್ಯಾಹಾರಿಗಳು. ಈ ಕುರಿಗಳನ್ನು ಇಟ್ಟುಕೊಂಡು ಏನು ಮಾಡುತ್ತಾರೆ ಸಾರ್...?’’ ಕಾಸಿ ಅರ್ಥವಾಗದೆ ಕೇಳಿದ.

 ‘‘ನೋಡ್ರೀ...ಈ ಕುರಿಗಳನ್ನು ನಾವು ಸಾಕದೇ ಇದ್ದಿದ್ದರೆ ಬೇರೆ ಪಕ್ಷದೋರು ತಮ್ಮ ದೊಡ್ಡಿಗೆ ತೆಗೆದುಕೊಳ್ತಾ ಇದ್ರು...ಈಗ ನಮ್ಮ ಪಕ್ಷಕ್ಕೆ ಬಂದುದರಿಂದ ಇದರ ಬೀಜ ಒಡೆದು, ಸಂತಾನಾಭಿವೃದ್ಧಿ ನಿಲ್ಲಿಸುವ ಯೋಜನೆಯನ್ನು ಮಾಡಲಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ಕುರಿಗಳು ಹಾದಿ ಬೀದಿಯಲ್ಲಿ ಓಡಾಡುತ್ತಾ ದಾಂಧಲೆ ಎಬ್ಬಿಸುವುದು ನಿಲ್ಲುತ್ತದೆ. ಈ ಕುರಿಗಳನ್ನು ಬಳಸಿ ಜಾತ್ಯತೀತ ಜನರು ಹಿಂದುತ್ವದ ತಳಿಗಳ ಮೇಲೆ ಛೂಬಿಡುವುದು ನಿಲ್ಲುತ್ತದೆ. ಬೀಜ ಒಡೆದ ಕುರಿಗಳನ್ನು ಹಿಂದುತ್ವದ ಮೂಗುದಾರ ಹಾಕಿ ನಮ್ಮ ಕೆಲಸಕ್ಕೆ ಬಳಸಬಹುದು. ಚುನಾವಣೆಯ ಯಜ್ಞ ಯಾಗಾದಿ ಸಂದರ್ಭದಲ್ಲಿ ಬಲಿಕೊಡುವುದಕ್ಕೆ ಇದನ್ನು ಬಳಕೆ ಮಾಡುತ್ತೇವೆ....’’ ಈಶ್ವರಪ್ಪ ವಿವರಿಸಿದರು.

‘‘ಹೀಗೆ, ನೀವು ಸಾಕಿದ ಕುರಿಗಳನ್ನು ಅವರು ವಶಕ್ಕೆ ತೆಗೆದುಕೊಂಡು ಅದನ್ನು ಬೀಜ ಒಡೆದು ಸಂತಾನಾಭಿವೃದ್ಧಿಯಾಗದಂತೆ ನೋಡಿಕೊಂಡರೆ, ಮುಂದೆ ನಿಮ್ಮ ಕುರಿ ವ್ಯಾಪಾರಕ್ಕೆ ತೊಡಕಾಗುವುದಿಲ್ಲವೇ? ಕುರಿಗಳ ಸಂಖ್ಯೆ ಕಡಿಮೆಯಾದರೆ ನಿಮ್ಮ ರಾಜಕೀಯ ಭವಿಷ್ಯಕ್ಕೇನು ಮಾಡುತ್ತೀರಿ?’’

 ‘‘ನೋಡ್ರೀ...ಈ ಕುರಿಗಳನ್ನು ನಂಬಿಕೊಂಡು ಹೆಚ್ಚು ಸಮಯ ನಾನು ಬಿಜೆಪಿಯೊಳಗೆ ಇರುವುದಕ್ಕೆ ಸಾಧ್ಯವಿಲ್ಲ. ಯಾವಾಗ ಬೇಕಾದರೂ ಈ ಕುರಿಗಳೆಲ್ಲ ಒಟ್ಟು ಸೇರಿ ನನ್ನನ್ನು ಗುಂಪಿನಿಂದ ಹೊರ ಹಾಕಬಹುದು. ಅದಕ್ಕೆ ಒಳ್ಳೆಯ ದರ ಸಿಗುವಾಗ ಅವುಗಳನ್ನು ಮಾರಿ, ನಾವು ನಮ್ಮ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು...ಇದೀಗ ಕೇಂದ್ರದಿಂದ ನಮ್ಮ ವರಿಷ್ಠರು ನಾನು ಸಾಕಿರುವ ಹಿಂದುಳಿದವರ್ಗದ ರಾಯಣ್ಣ ಕುರಿಗಳಿಗೆ ಒಳ್ಳೆಯ ದರವನ್ನು ಕೊಟ್ಟಿದ್ದಾರೆ. ಆದುದರಿಂದ ಸದ್ಯಕ್ಕೆ ನಾನು ಸಂತೃಪ್ತನಾಗಿದ್ದೇನೆ. ಒಂದು ವೇಳೆ ಇವರು ಒಳ್ಳೆಯ ದರ ಕೊಡದೇ ಇದ್ದರೆ ದೇವೇಗೌಡರು ಅದನ್ನು ಕೊಂಡುಕೊಳ್ಳುವ ಎಲ್ಲ ಸಾಧ್ಯತೆಗಳಿದ್ದವು. ಆದರೆ, ಕೆಲವು ಒಳ್ಳೆಯ ತಳಿಗಳನ್ನು ಗುಟ್ಟಾಗಿ ತೆಗೆದಿಟ್ಟಿದ್ದೇನೆ. ಅದರ ಸಂತಾನಾಭಿವೃದ್ಧಿಯನ್ನು ಒಳಗೊಳಗೆ ಮಾಡಿಸುತ್ತಿದ್ದೇನೆ. ಮುಂದೆ ಯಾವತ್ತಾದರೂ ನನ್ನನ್ನು ಬಿಜೆಪಿಯ ನಾಯಕರು ಹೊರ ಹಾಕಿದ್ದೇ ಆದರೆ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಿ ಅದನ್ನು ಕಾಂಗ್ರೆಸ್‌ಗೋ, ಜೆಡಿಎಸ್‌ಗೋ ಮಾರಿ, ನನ್ನ ವ್ಯಾಪಾರವನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಧೈರ್ಯ ನನಗಿದೆ...’’ ಈಶ್ವರಪ್ಪ ಮೀಸೆ ತಿರುವಿದರು.

‘‘ಸದ್ಯಕ್ಕೆ ನೀವು ಸಾಕಿದ ಕುರಿಗಳ ಸ್ಥಿತಿ ಏನು ಸಾರ್?’’ ಕಾಸಿ ಕೇಳಿದ.

‘‘ನಮ್ಮ ನಾಯಕರು ಅದರ ಮೇಲಿನ ತುಪ್ಪಟವನ್ನೆಲ್ಲ ಸುಲಿದು, ಅದಕ್ಕೆ ಕೇಸರಿ ಬಣ್ಣವನ್ನು ಬಳಿಯಲ್ಲಿದ್ದಾರೆ. ಬಳಿಕ ಪ್ರೀತಿಯಿಂದ ಅದರ ಬೀಜವನ್ನು ಒಡೆದು ಅದಕ್ಕೆ ಆರೆಸ್ಸೆಸ್ ಕಂಪೆನಿಯ ಮೂಗುದಾರವನ್ನು ಹಾಕಲಿದ್ದಾರೆ. ಆ ಮೂಗುದಾರದ ಒಡೆತನವನ್ನು ಅನಂತಕುಮಾರ್, ಸುರೇಶ್ ಕುಮಾರ್‌ರಂತಹ ಸಜ್ಜನ ರಾಜಕಾರಣಿಗಳ ಕೈಗೆ ಒಪ್ಪಿಸಲಿದ್ದಾರೆ. ಅದರ ಸಕಲ ಭದ್ರತೆಗಳನ್ನು ಅವರು ನಿರ್ವಹಿಸಲಿದ್ದಾರೆ. ಇದು ಒಬ್ಬ ಕುರುಬನಾಗಿ ನನ್ನ ಸಮುದಾಯದ ಕುರಿಗಳಿಗೆ ನಾನು ಕೊಟ್ಟಿರುವ ಉಡುಗೊರೆ. ಮುಂದಿನ ದಿನಗಳಲ್ಲಿ ಎಲ್ಲ ಕುರಿಗಳಿಗೆ ಜನಿವಾರಗಳನ್ನು ಹಾಕುವ ಭರವಸೆಯನ್ನೂ ಪೇಜಾವರ ಶ್ರೀಗಳು ನೀಡಿದ್ದಾರೆ. ಗೋಮಾತೆಯನ್ನು ರಾಷ್ಟ್ರಪ್ರಾಣಿ ಮಾಡಬೇಕು ಎಂದು ಒತ್ತಾಯಿಸಿದ ಹಾಗೆ ಕುರಿಗಳನ್ನು ಶಿವಮೊಗ್ಗ ಜಿಲ್ಲಾಮಟ್ಟದ ಪ್ರಾಣಿಯಾಗಿ ಘೋಷಿಸಬೇಕು ಎಂದೂ ಜಿಲ್ಲಾಡಳಿತವನ್ನು ಅವರು ಒತ್ತಾಯಿಸಲಿದ್ದಾರೆ.....’’

‘‘ಸಾರ್...ನಿಮಗೆ ಮೂಗುದಾರ ಹಾಕುವ ಪ್ರಯತ್ನದಲ್ಲಿ ಬಿಜೆಪಿ ಯಶಸ್ವಿಯಾಗಿದೆಯಂತೆ...’’ ಕಾಸಿ ಮೆಲ್ಲಗೆ ಕೆಣಕಿದ.

 ‘‘ನನಗೆ ಮೂಗುದಾರ ಹಾಕಲು ಈ ಜನ್ಮದಲ್ಲಿ ಸಾಧ್ಯವಿಲ್ಲ....’’ ಈಶ್ವರಪ್ಪ ಅಬ್ಬರಿಸಿದರು.

 ‘‘ಅದೂ ಹೌದು ಸಾರ್. ನಿಮಗೆ ಮೂಗೇ ಇಲ್ಲ. ಇನ್ನು ಮೂಗುದಾರ ಹಾಕುವುದಾದರೂ ಹೇಗೆ....’’ ಹೀಗಂದವನೇ ಎಂಜಲು ಕಾಸಿ ತಿರುಗಿ ನೋಡದೆ ಓಡ ತೊಡಗಿದ. ಈಶ್ವರಪ್ಪ ‘ಹಿಡಿಯಿರಿ, ಕತ್ತರಿಸಿ, ಕೊಲ್ಲಿರಿ....’’ ಎಂದು ಅಬ್ಬರಿಸತೊಡಗಿದರು.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News