ಸುಟ್ಟ ಮಸೀದಿಯ ಮರು ನಿರ್ಮಾಣಕ್ಕೆ ಒಂದಾದ ಅಮೆರಿಕನ್ನರು

Update: 2017-01-30 15:32 GMT

ವಿಕ್ಟೋರಿಯ (ಟೆಕ್ಸಾಸ್), ಜ. 30: ಅಮೆರಿಕದ ಟೆಕ್ಸಾಸ್ ರಾಜ್ಯದ ವಿಕ್ಟೋರಿಯ ನಗರದಲ್ಲಿ ಶನಿವಾರ ಮುಂಜಾನೆ ಸುಟ್ಟು ಭಸ್ಮವಾದ ಮಸೀದಿಯ ಪುನರ್ನಿರ್ಮಾಣಕ್ಕಾಗಿ ಟೆಕ್ಸಾಸ್ ರಾಜ್ಯದ ನಿವಾಸಿಗಳು ಹಣ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ.

ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಿರಾಶ್ರಿತರು ಮತ್ತು ಸಂದರ್ಶಕರಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸುವ ಸರಕಾರಿ ಆದೇಶವೊಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ ಸ್ವಲ್ಪವೇ ಹೊತ್ತಿನ ಬಳಿಕ ಮಸೀದಿಗೆ ನಿಗೂಢವಾಗಿ ಬೆಂಕಿ ಬಿದ್ದಿತ್ತು.

ಮಸೀದಿಯನ್ನು ಪುನರ್ನಿರ್ಮಿಸಲು ಆನ್‌ಲೈನ್ ದೇಣಿಗೆ ಅಭಿಯಾನವೊಂದನ್ನು ಇಸ್ಲಾಮಿಕ್ ಸೆಂಟರ್ ಆಫ್ ವಿಕ್ಟೋರಿಯ ಆರಂಭಿಸಿದೆ. ಇಪ್ಪತ್ತನಾಲ್ಕು ಗಂಟೆಗಳಲ್ಲಿ 6 ಲಕ್ಷ ಡಾಲರ್ (ಸುಮಾರು 41 ಕೋಟಿ ರೂಪಾಯಿ) ಮೊತ್ತವನ್ನು ಸಂಗ್ರಹಿಸಲಾಗಿದೆ.

ಒಟ್ಟು 8.5 ಲಕ್ಷ ಡಾಲರ್ (ಸುಮಾರು 58 ಕೋಟಿ ರೂಪಾಯಿ) ಸಂಗ್ರಹಿಸುವ ಗುರಿಯನ್ನು ಅಭಿಯಾನ ಹೊಂದಿದೆ.

‘‘ಶನಿವಾರ ಮುಂಜಾನೆ ಮಸೀದಿ ಉರಿಯುತ್ತಿರುವುದನ್ನು ನೋಡುವಾಗ ನಮಗೆ ಆಘಾತವಾಯಿತು’’ ಎಂದು ಇಸ್ಲಾಮಿಕ್ ಸೆಂಟರ್‌ನ ಅಧ್ಯಕ್ಷ ಶಾಹಿದ್ ಹಶ್ಮಿ ‘ಅಲ್ ಜಝೀರ’ದೊಂದಿಗೆ ಹೇಳಿದರು.

ಈಗ ಧನ ಮತ್ತು ನೈತಿಕ ಬೆಂಬಲದ ಸುರಿಮಳೆಯಿಂದ ಹಶ್ಮಿ ಮತ್ತೊಮ್ಮೆ ಆಘಾತಕ್ಕೊಳಗಾಗಿದ್ದಾರೆ. ‘‘ಇದು ನಂಬಲಸಾಧ್ಯವಾಗಿದೆ. ನಾವು ತುಂಬಾ ಆಭಾರಿಯಾಗಿದ್ದೇವೆ’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News