ಬಿಜೆಪಿ-ಶಿವಸೇನೆ ಬಿರುಕು!, ಅಸ್ತಿತ್ವಕ್ಕಾಗಿ ಶಿವಸೇನೆ ಪ್ರತ್ಯೇಕ ಹೋರಾಟ

Update: 2017-01-30 18:33 GMT

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮುರಿದು ಬಿದ್ದ ನಂತರ ಫಡ್ನವೀಸ್ ಸರಕಾರವು ಅಲ್ಲಾಡಲು ಶುರುವಾಗಿದೆ. ಸರಕಾರದ ಭವಿಷ್ಯ ಮುಂಬೈ ಮನಪಾ ಚುನಾವಣಾ ಫಲಿತಾಂಶವನ್ನು ಅವಲಂಬಿಸಿದೆ. ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಅವರು ಕಳೆದ ಗುರುವಾರದಂದು ''ಬಿಜೆಪಿ ಜೊತೆಗೆ ಇನ್ನು ಮೈತ್ರಿ ಇಲ್ಲ, ಏಕಾಂಗಿಯಾಗಿ ಶಿವಸೇನೆ ಸ್ಪರ್ಧಿಸುತ್ತದೆ''ಎಂದು ಏಕಾಏಕಿ ಘೋಷಿಸಿಬಿಟ್ಟರು. ಬಿಜೆಪಿ ಇದನ್ನು ನಿರೀಕ್ಷಿಸಿರಲಿಲ್ಲ.

2014ರ ವಿಧಾನಸಭಾ ಚುನಾವಣೆ, ಡೊಂಬಿವಲಿ-ಕಲ್ಯಾಣ್ ಮನಪಾ ಚುನಾವಣೆ, ಈಗ ಮುಂಬೈ, ಥಾಣೆ ಮನಪಾ ಚುನಾವಣೆ.... ಹೀಗೆ ಪ್ರತೀ ಚುನಾವಣೆಯಲ್ಲೂ ಶಿವಸೇನೆ-ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೇ ಬಂದಿದೆ. ಇದೀಗ ಶಿವಸೇನೆ ಜೊತೆಗೆ ಫಡ್ನವೀಸ್ ಸರಕಾರದ ಆಯುಷ್ಯ ದೀರ್ಘಕಾಲ ಇರಲಾರದು ಎಂಬ ಮಾತು ಕೇಳಿ ಬರುತ್ತಿದೆ, ಶಿವಸೇನಾ ನಾಯಕ ಸಂಜಯ್ ರಾವುತ್ ಅವರು ಪ್ರತಿಕ್ರಿಯಿಸುತ್ತಾ'' ಈಗ ಸರಕಾರದ ಬೆಂಬಲ ಹಿಂದೆಗೆದುಕೊಂಡು ರಾಜಕೀಯ ಅಲ್ಲೋಲ ಕಲ್ಲೋಲಕ್ಕೆ ಶಿವಸೇನೆ ಇಳಿಯಲಾರದು. ಸದ್ಯ ಕಾದು ನೋಡುವ ಪಾತ್ರವನ್ನು ಶಿವಸೇನೆ ನಿರ್ವಹಿಸುತ್ತಿದೆ.'' ಎಂದಿದ್ದಾರೆ. ಶಿವಸೇನಾ ಮಂತ್ರಿಗಳು ಕಿಸೆಯಲ್ಲಿ ರಾಜೀನಾಮೆ ಪತ್ರ ಹಿಡಿದು ತಿರುಗುತ್ತಿದ್ದಾರೆ ಉದ್ಧವ್‌ರ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ರಾಜಕೀಯ ಮೂಲಗಳ ಪ್ರಕಾರ ಫೆಬ್ರವರಿ 23ರಂದು ಫಡ್ನವೀಸ್ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ. ಆ ದಿನ ಮುಂಬೈ ಮನಪಾ ಸಹಿತ ರಾಜ್ಯದ 10 ಮಹಾನಗರ ಪಾಲಿಕೆ, 25 ಜಿಲ್ಲಾ ಪರಿಷತ್‌ಗಳ ಫಲಿತಾಂಶ ಬರಲಿದೆ. ಒಂದು ವೇಳೆ ಶಿವಸೇನೆ ಗೆದ್ದು ಬಂದದ್ದಾದರೆ ಅದು ಸರಕಾರಕ್ಕೆ ನೀಡಿದ ಬೆಂಬಲ ಹಿಂದೆಗೆದುಕೊಳ್ಳಲಿದೆ. ಶಿವಸೇನೆ ಸೋತರೆ ಸರಕಾರದ ಜೊತೆಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಶರದ್ ಪವಾರ್‌ರ ಎನ್.ಸಿ.ಪಿ.ಯ ಪಾತ್ರ ಬಹಳ ಮುಖ್ಯವಾಗಲಿದೆ.

ಇತ್ತ ಧೈರ್ಯ ಇದ್ದರೆ ಶಿವಸೇನೆ ಸರಕಾರದಿಂದ ಹೊರಬರಲಿ ಎನ್ನುತ್ತಿವೆ ಈಗ ವಿಪಕ್ಷಗಳು. ಆದರೆ ಆರ್.ಪಿ.ಐ. (ಆಠವಳೆ) ಮಾತ್ರ ಬಿಜೆಪಿ ಜೊತೆಗಿರುವುದಾಗಿ ಹೇಳಿದೆ. ಮನಪಾದಲ್ಲಿ ಶಿವಸೇನೆ ಜೊತೆ ಬಿಜೆಪಿ 22 ವರ್ಷಗಳಿಂದ ಮೈತ್ರಿ ಮಾಡಿಕೊಂಡಿತ್ತು. ಇನ್ನೊಂದೆಡೆ ಶಿವಸೇನೆ ಮತ್ತು ಮನಸೇ ನಡುವೆಯೂ ಮೈತ್ರಿಯ ಮಾತುಕತೆ ಜೋರಾಗಿ ಚರ್ಚೆಯಾಗುತ್ತಿದೆ.
* * *

ಶಿವಸೇನೆಯ 'ಮಾಡು-ಮಡಿ' ಹೆಜ್ಜೆ
ಮುಂಬೈಯಲ್ಲಿ ಈಗ ರಾಜಕೀಯ ರಂಗದಲ್ಲಿ ಸೂಪರ್ ಮೆಲೋಡ್ರಾಮ ನೋಡಲು ಸಿಗುತ್ತಿದೆ. ಒಂದು ಸಿನೆಮಾ ಕತೆಯಂತೆ ದಿನೇದಿನೇ ಘಟನೆಗಳು ಕುತೂಹಲ ಹುಟ್ಟಿಸುತ್ತಿವೆ. ಬಡವನೊಬ್ಬ ತನ್ನ ಬಡತನದ ದಿನಗಳನ್ನು ಮರೆತು ಅನಿರೀಕ್ಷಿತ ಶ್ರೀಮಂತನಾದರೆ ಯಾವ ರೀತಿ ಬದಲಾಗುವನು....! ಎಂಬ ಬಗ್ಗೆ ಸಿನೆಮಾಗಳಲ್ಲಿ ನೋಡಿರಬಹುದು. ಆದರೆ ಮುಂಬೈಯಲ್ಲೀಗ ಶಿವಸೇನೆ - ಬಿಜೆಪಿ ಮೈತ್ರಿ ಮಾತುಕತೆಯ ಸಂದರ್ಭದಲ್ಲಿ ಈ ಮಾತು ಜೋರಾಗಿ ಕೇಳಿ ಬಂದಿದೆ. ಕೊನೆಗೂ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಯಿತು.

ದೇಶಾದ್ಯಂತ ಒಂದೊಮ್ಮೆ ಬಿಜೆಪಿ ಅಸ್ಪೃಶ್ಯವಾಗಿದ್ದಾಗ-ಶಿವಸೇನೆ ಕೋಮುವಾದಿಯಾಗಿದ್ದಾಗ ಯಾರೂ ಇವರನ್ನು ಹತ್ತಿರ ಕೂರಿಸಲು ಇಷ್ಟಪಟ್ಟಿರಲಿಲ್ಲ. ಆಗ ಇವರಿಬ್ಬರೂ ಜೊತೆಯಾಗಿ ಹೆಜ್ಜೆ ಇರಿಸಲು ತೀರ್ಮಾನ ಮಾಡಿದ್ದರು. ಕಳೆದ 25 ವರ್ಷಗಳ ಈ ಸಂಬಂಧ 2014 ರ ಲೋಕಸಭಾ ಚುನಾವಣೆಯ ನಂತರ ದಿಢೀರ್ ಬದಲಾವಣೆ ಕಾಣಿಸತೊಡಗಿತು. ದೊಡ್ಡಣ್ಣ ಶಿವಸೇನೆಯನ್ನು ಹಿಂದಕ್ಕೆ ಸರಿಸಿದ ಬಿಜೆಪಿ ತಾನಿನ್ನು ದೊಡ್ಡಣ್ಣ ಎನ್ನಿಸಿಕೊಳ್ಳುವುದಕ್ಕೆ ಮುಂದಾಯಿತು. ಸಿಕ್ಕಿದ ಅವಕಾಶವನ್ನು ಕೈಬಿಡಲು ತಯಾರಿರಲಿಲ್ಲ. ಬಡ ಮತ್ತು ಅಸ್ಪೃಶ್ಯದ ಸ್ಥಿತಿಯಲ್ಲಿ ಅಂದು ಮಹಾರಾಷ್ಟ್ರದಲ್ಲಿ ಬಿಜೆಪಿಯ ಕೈ ಹಿಡಿದು ಎತ್ತಿದ್ದು ಶಿವಸೇನೆ. ಅದರೆ ಇಂದು ಅದೇ ಶಿವಸೇನೆಯು ಬಿಜೆಪಿಗೆ ಅಸ್ಪಶ್ಯವಾಗ ಹತ್ತಿದೆ! ಇಂದಿನ ಪರಿಸ್ಥಿತಿ ಗಮನಿಸಿದರೆ ಬಿಜೆಪಿಗೆ ಶಿವಸೇನೆಯ ಗೆಳೆತನ ಕೈಬಿಡುವುದು ಮಾತ್ರವಲ್ಲ, ಶಿವಸೇನೆಯನ್ನು ಸಾಧ್ಯವಾದಷ್ಟು ಮೂಲೆಗೊತ್ತಬೇಕು ಎಂಬಂತಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಶಿವಸೇನೆಯ ಜೊತೆ ಮೈತ್ರಿಯ ಆಸೆ ಇದ್ದರೂ ಮುಖ್ಯಮಂತ್ರಿಯ ಸುತ್ತ ಚಕ್ರವ್ಯೆಹವನ್ನು ದಿಲ್ಲಿಯ ಓರ್ವ ದೊಡ್ಡ ನೇತಾರರು ಸೃಷ್ಟಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಅವರ ಪ್ರಕಾರ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದಲ್ಲಿ ದ್ವಿತೀಯ ಪ್ರಮೋದ್ ಮಹಾಜನ್ ಅಥವಾ ಗೋಪಿನಾಥ ಮುಂಢೆ ಆಗುವುದು ಬೇಡವಂತೆ. ಎಲ್ಲರಿಗೂ ಗೊತ್ತಿದ್ದಂತೆ ಒಂದೊಮ್ಮೆ ಶಿವಸೇನೆ-ಬಿಜೆಪಿಯಲ್ಲಿ ವಿವಾದ ಉಂಟಾದಾಗ ಪ್ರಮೋದ್ ಮಹಾಜನ್, ಗೋಪಿನಾಥ ಮುಂಢೆ ಅವರು ಮಧ್ಯಪ್ರವೇಶಿಸಿ ಬಾಳಾ ಸಾಹೇಬ ಠಾಕ್ರೆ ಜೊತೆ ಮಾತನಾಡಿ ವಿವಾದ ಶಾಂತಗೊಳಿಸುತ್ತಿದ್ದರು. ಇದೀಗ ಫಡ್ನವೀಸ್‌ಗೆ ಆ ಸ್ಥಾನವನ್ನು ನೀಡಲು ದಿಲ್ಲಿಯ ಕೆಲವರು ಸಿದ್ಧರಾಗಿಲ್ಲ. ಈ ವ್ಯೆಹದ ಪ್ರಕಾರ ಫಡ್ನವೀಸ್‌ರ ಕುರ್ಚಿಯನ್ನು ಅಸ್ಥಿರಗೊಳಿಸಿ, ಅಲ್ಲಿ ಬಿಜೆಪಿಯ ಬೇರೊಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕೂರಿಸುವುದಾಗಿದೆ ಎನ್ನುವುದು ಪಕ್ಷದಲ್ಲಿ ಕೇಳಿ ಬರುವ ಮಾತು.

ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮತಗಳ ವಿಭಜನೆ ಆಗಬಾರದು ಎಂದು ಫಡ್ನವೀಸ್ ಶಿವಸೇನೆಯ ಜೊತೆ ಮೈತ್ರಿಯನ್ನು ಇಚ್ಛಿಸಿದ್ದರು. ಆದರೆ ಫಡ್ನವೀಸ್ ವಿರೋಧಿಗಳು ಇದಕ್ಕೆ ತಯಾರಿರಲಿಲ್ಲ.
ಮುಂಬೈ ಮಹಾನಗರ ಪಾಲಿಕೆ ಶಿವಸೇನೆಗಾಗಿ ರಾಜನೀತಿಯ ಜೀವನ ಶಕ್ತಿ ಎನ್ನುವುದು ಫಡ್ನವೀಸ್‌ಗೂ ಗೊತ್ತಿದೆ. ಹೀಗಾಗಿ ಮನಪಾ ಚುನಾವಣೆಯಲ್ಲಿ ಶಿವಸೇನೆಯು ಶಕ್ತಿಮೀರಿ ಹೋರಾಟಕ್ಕೆ ಧುಮುಕಿದೆ. ಬಿಜೆಪಿ ನೇತಾರರ ಕೆಲವು ಹೇಳಿಕೆಗಳು ಶಿವಸೇನೆಯನ್ನು ಕೆರಳಿಸಿವೆ.

 ಇತಿಹಾಸವನ್ನು ಒಮ್ಮೆ ಗಮನಿಸಿದರೆ ಒಂದು ಸಂಗತಿ ತಿಳಿದು ಬರುತ್ತದೆ. ಶಿವಸೇನೆಗೆ ತನ್ನ ಅಸ್ತಿತ್ವ ಸಮಾಪ್ತಿಯಾಗುವ ಭಯ ಕಾಡುತ್ತಿದೆಯೇ? (ಈ ಚರ್ಚೆ ಇದೀಗ ಕೇಳಿ ಬರುತ್ತಿದೆ.) ಈ ರೀತಿಯ ಚರ್ಚೆ ಕಾಣಿಸಿದಾಗಲೆಲ್ಲ ಶಿವಸೇನೆಗೆ ಇದು ಸಂಜೀವಿನಿ ತರಹ ಕೆಲಸ ಮಾಡಲು ಪ್ರೇರಣೆ ದೊರೆಯುತ್ತಾ ಬಂದಿದೆ. ಈ ಬಾರಿಯೂ ಹಾಗೆಯೇ ಆಗಿದೆ. ಶಕ್ತಿಮೀರಿ ಪ್ರಚಾರದಲ್ಲಿ ಧುಮುಕಿದ ಶಿವಸೇನೆಯ ಉದ್ಧವ್ ಠಾಕ್ರೆ ಪ್ರತೀದಿನ ಎರಡೆರಡು ಸಭೆಗಳಿಗೆ ಹಾಜರಾಗುತ್ತಿದ್ದಾರೆ. ಬಿಜೆಪಿ ಈ ಸಮಯ ಶಿವಸೇನೆಯನ್ನು ಛೇಡಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಅತ್ತ ಕಾಂಗ್ರೆಸ್ ಎನ್.ಸಿ.ಪಿ. ಕೂಡಾ ಮೈತ್ರಿ ಮಾಡಿಕೊಂಡಿಲ್ಲ. ಎರಡೂ ಬೇರೆ ಬೇರೆಯಾಗಿ ಸ್ಪರ್ಧಿಸುತ್ತಿವೆ. ಒಂದು ವೇಳೆ ಫಲಿತಾಂಶದ ನಂತರ ತ್ರಿಶಂಕು ಸ್ಥಿತಿ ಬಂದರೆ ಬಿಜೆಪಿ - ಶಿವಸೇನೆ ಕಲ್ಯಾಣ್-ಡೊಂಬಿವಿಲಿ ಮಹಾನಗರ ಪಾಲಿಕೆಯ ಫಾರ್ಮುಲಾ ಬಳಸಿಕೊಳ್ಳಬಹುದು. ಅಥವಾ ಬಿಜೆಪಿ - ಎನ್.ಸಿ.ಪಿ. ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಕೂಡಾ ಅಲ್ಲಗಳೆಯುವಂತಿಲ್ಲ. ಈ ನಡುವೆ ಕಾಂಗ್ರೆಸ್ ನಾಯಕರ ಎರಡು ಬಣಗಳಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ನಿರಾಶರಾಗಿದ್ದಾರೆ.

ಪ್ರತೀ ಚುನಾವಣೆಯು ಪ್ರತಿಯೊಂದು ರಾಜಕೀಯ ಪಕ್ಷಗಳಿಗೆ ಅಗ್ನಿ ಪರೀಕ್ಷೆಯೇ ಆಗಿರುತ್ತದೆ. ಆದರೆ ಮುಂಬೈ ಮತ್ತು ಥಾಣೆ ಮಹಾನಗರ ಪಾಲಿಕೆಯ ಈ ಸಲದ ಚುನಾವಣೆಯು ಮುಖ್ಯವಾಗಿ ಶಿವಸೇನೆಯ ಅಸ್ತಿತ್ವದ ಅಸಲಿ ಅಗ್ನಿಪರೀಕ್ಷೆ ಎನ್ನಿಸಿಕೊಳ್ಳಲಿದೆ. ಅದು ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮೈತ್ರಿ ನಡೆಯಲಿ, ಇಲ್ಲದಿರಲಿ ಶಿವಸೇನೆಗೆ ಯಾವುದೇ ಬೆಲೆ ತೆತ್ತಾದರೂ ತನ್ನ ಅಸಲಿ ಶಕ್ತಿಯನ್ನು ಈ ಬಾರಿ ತೋರಿಸಲೇಬೇಕಾಗಿದೆ. ಶಿವಸೇನೆ ಒಂದು ವೇಳೆ ಥಾಣೆ ಮತ್ತು ಮುಂಬೈಯಲ್ಲಿ ಸೋತದ್ದಾದರೆ ಅದರ ಎಲ್ಲಾ ಹೇಳಿಕೆಗಳು ಒಂದು ಭ್ರಮೆ ಎಂದು ಸಾಬೀತಾಗಬಹುದು. ಹಾಗಿದ್ದೂ ಶಿವಸೇನೆಯ ಎದುರು ಎಂತಹ ಸವಾಲು ಇದೆ ಎನ್ನುವುದಕ್ಕೆ 2014ರ ವಿಧಾನಸಭಾ ಚುನಾವಣೆಯ ವಿಶ್ಲೇಷಣೆ ಮಾಡಬಹುದಾಗಿದೆ.

ಮುಂಬೈ ಮನಪಾದ 227ರಲ್ಲಿ 115 ವಾರ್ಡ್‌ಗಳಲ್ಲಿ ಬಿಜೆಪಿಗೆ ಆಗ ಅತಿಹೆಚ್ಚು ಮತಗಳು ಸಿಕ್ಕಿದ್ದುವು. ಈ ಫಲಿತಾಂಶ ಕಂಡು ಇದೀಗ ಶಿವಸೇನೆ ಸ್ವಲ್ಪಹೆದರಿದೆ. ಅತ್ತ ಈ ಫಲಿತಾಂಶ ಮುಂದಿಟ್ಟು ಮೈತ್ರಿ ಏರ್ಪಡಿಸುವುದಾದರೆ ತನಗೆ ಹೆಚ್ಚು ಸೀಟುಗಳ ಬೇಡಿಕೆಗೆ ಬಿಜೆಪಿ ಮುಂದಾ ಗಿತ್ತು. ಶಿವಸೇನೆ ಕೂಡಾ ಒಮ್ಮೆಲೇ ಅವಸರ ಮಾಡದೆ ಈ ಫಲಿತಾಂಶ ತನಗೆ ಅನುಕೂಲ ಆಗಿಲ್ಲವೆಂದು ಭಾವಿಸಿಕೊಂಡಿದೆ. ಹೀಗಾಗಿ ಚುನಾವಣಾ ಆಚಾರ ಸಂಹಿತೆ ಜಾರಿಗೆ ಬರುವ ತನಕವೂ ತನ್ನದೇ ಶಕ್ತಿಯ ಮೇಲೆ ಚುನಾವಣೆ ಎದುರಿಸುವ ಮಾತನ್ನಾಡುತ್ತಾ ಬಂತು. ಚುನಾವಣಾ ಆಚಾರ ಸಂಹಿತೆ ಜಾರಿಗೆ ಬರುತ್ತಲೇ ಬಿಜೆಪಿ ಜೊತೆಗಿನ ಮೈತ್ರಿ ವಿಷಯದಲ್ಲಿ ಚರ್ಚೆ ಮಾಡಲು ಮುಂದಾಯಿತು.

ಶಿವಸೇನಾ ನೇತೃತ್ವ ಈ ಬಾರಿ ಯಾವುದೇ ರೀತಿಯ ಅಪಾಯವನ್ನು ಆಹ್ವಾನಿಸಲು ತಯಾರಿರಲಿಲ್ಲ. ಅತ್ತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೂ ಗೊತ್ತು- ಶಿವಸೇನೆಯ ಜೀವ ಮುಂಬೈ ಮನಪಾದಲ್ಲಿದೆ ಎನ್ನುವುದು. ಹಾಗಾಗಿ ಕಾರ್ಯಕರ್ತರ ವಿರೋಧದ ನಡುವೆಯೂ ಮುಖ್ಯಮಂತ್ರಿ ಫಡ್ನವೀಸ್ ಅವರು ಶಿವಸೇನೆಯ ಜೊತೆಗಿನ ಮೈತ್ರಿಯ ಮಾತುಗಳನ್ನಾಡುತ್ತಾ ಬಂದರು. ಮುಂಬೈ ಮನಪಾದ ಹಿಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳು ಜೊತೆಗೂಡಿ ಚುನಾವಣೆ ಎದುರಿಸಿದ್ದುವು. ಇದು ಎರಡೂವರೆ ದಶಕದ ಮೈತ್ರಿಯಾಗಿತ್ತು. ಆಗ ಎಷ್ಟು ಸೀಟು ಯಾರಿಗೆ ಎನ್ನುವುದನ್ನು ಶಿವಸೇನೆಯೇ ನಿಶ್ಚಯಿಸಿತ್ತು. ಹಿಂದಿನ ಬಾರಿ ಬಿಜೆಪಿಗೆ 63 ಸೀಟು ನೀಡಲಾಗಿತ್ತು. ಇದರಲ್ಲಿ 31 ಸೀಟು ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ ಬಿಜೆಪಿ ನಿರ್ಣಾಯಕ ಸ್ಥಿತಿಯಲ್ಲಿ ವರ್ತಿಸಿದೆ. ಹೀಗಾಗಿ ಈ ಸಲ ಬಿಜೆಪಿ ತನ್ನ ಲಾಭವನ್ನು ಪಡೆದುಕೊಳ್ಳಲು ಮುಂದಾಗಿತ್ತು. ಪಾರದರ್ಶಿತ್ವದ ಕೆಲಸ, ಭ್ರಷ್ಟಾಚಾರ ಮುಕ್ತ ಮುಂಬೈ ಮನಪಾ ಈ ಬಾರಿ ಬಿಜೆಪಿಯ ಚುನಾವಣಾ ಘೋಷಣೆಯಾಗಿದೆ. ಸದ್ಯಕ್ಕೆ ಬಿಜೆಪಿಯ ದೃಷ್ಟಿ ಮುಂಬೈಯ ಮೇಯರ್ ಸ್ಥಾನದತ್ತ ಹರಿದಿದೆ.

ಹಾಗಿದ್ದರೂ ಮುಂಬೈ ಮೇಯರ್ ಸ್ಥಾನ ಕೇವಲ ರಬ್ಬರ್ ಸ್ಟ್ಯಾಂಪ್ ಎನ್ನುವುದೂ ನಿಜ. ಎಲ್ಲಾ ಆಡಳಿತಾತ್ಮಕ ಅಧಿಕಾರ ಮನಪಾ ಕಮಿಶನರ್ ಬಳಿಯೇ ಇರುವುದು. ನಗರ ವಿಕಾಸ ಮಂತ್ರಾಲಯದ ಸೂಚನೆಯಂತೆ ಮೇಯರ್ ತನ್ನ ಅಧಿಕಾರವನ್ನು ಉಪಯೋಗಿಸುತ್ತಾರೆ. ನಗರ ವಿಕಾಸ ಮಂತ್ರಾಲಯವು ಸ್ವತಹ ಮುಖ್ಯಮಂತ್ರಿಯ ಅಧಿಕಾರ ವ್ಯಾಪ್ತಿಯಲ್ಲೇ ಇದೆ. ಆದರೂ ಶಿವಸೇನೆಯ ಮನೋಬಲ ಮುರಿಯಲು ಬಿಜೆಪಿಯ ಗುರಿ ಈ ಬಾರಿ ಮೇಯರ್ ಸ್ಥಾನ ವಶಪಡಿಸುವುದಾಗಿದೆ. ಹೀಗಾಗಿ ಅದರ ದೃಷ್ಟಿ ಕನಿಷ್ಟ ಸೀಟು 100-110 ರ ತನಕ ತಲುಪಿತ್ತು. ಆದರೆ ಶಿವಸೇನೆ ಕೊನೆಗೆ 75-80 ಸೀಟುಗಳ ತನಕ ಮಾತ್ರ ಒಪ್ಪಿಗೆ ನೀಡಲು ಸಿದ್ಧತೆ ಮಾಡಿತ್ತು.

ಒಂದು ವೇಳೆ ಶಿವಸೇನೆ ಒಪ್ಪಿದ್ದರೆ ಅದು ಚುನಾವಣೆ ಫಲಿತಾಂಶಕ್ಕೆ ಮೊದಲೇ ಸೋಲು ಒಪ್ಪಿಕೊಂಡಂತಾಗಬಹುದಿತ್ತು! ಶಿವಸೇನೆ ಮೂಲಗಳ ಪ್ರಕಾರ ಹೆಚ್ಚೆಂದರೆ ಬಿಜೆಪಿಗೆ 75-80 ಸೀಟುಗಳನ್ನು ನೀಡಲು ಮಾತ್ರ ತಯಾರಿತ್ತು. ಇದನ್ನು ಬಿಜೆಪಿ ಒಪ್ಪಲಿಲ್ಲ. ಬಿಜೆಪಿಯು ಮನಪಾದಲ್ಲಿ ಪಾರದರ್ಶಿತ್ವ ಇರಬೇಕು ಎನ್ನುವ ಮಾತನ್ನು ಮತ್ತೆ ಮತ್ತೆ ಹೇಳುತ್ತಿರುವುದಕ್ಕೆ ವ್ಯಂಗ್ಯವಾಡಿದ ಶಿವಸೇನೆಯು ಪ್ರತಿಕ್ರಿಯಿಸುತ್ತಾ - ''ಪಾರದರ್ಶಿತ್ವ ಕೇವಲ ಮಹಾನಗರ ಪಾಲಿಕೆಯಲ್ಲಿ ಮಾತ್ರ ಯಾಕೆ? ರಾಜ್ಯ ಸರಕಾರ -ಕೇಂದ್ರ ಸರಕಾರದಲ್ಲೂ ಯಾಕೆ ಬಿಜೆಪಿ ಅಪೇಕ್ಷಿಸುವುದಿಲ್ಲ....?'' ಎಂದು ಪ್ರಶ್ನಿಸಿದೆ.

ಜನವರಿ 18 ರಂದು ಶಿವಸೇನೆ - ಬಿಜೆಪಿ ದ್ವಿತೀಯ ಬೈಠಕ್ ನಡೆದಿತ್ತು. ಆದರೆ ಯವ ಫಲಿತಾಂಶವೂ ಬರಲಿಲ್ಲ. ಕೆಲವು ನಾಯಕರಲ್ಲಿ ಮೈತ್ರಿಗೆ ಒಲವು ಕಂಡು ಬಂದರೂ ತಳಮಟ್ಟದ ಕಾರ್ಯಕರ್ತರಲ್ಲಿ ಬಿಜೆಪಿಯು ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಯಾಕೆಂದರೆ ಒಂದು ವೇಳೆ ಮೈತ್ರಿಗೆ ಒಪ್ಪಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆ ಇದ್ದ ಪಕ್ಷಗಳ ಅನೇಕ ಅಭ್ಯರ್ಥಿಗಳಿಗೆ ಸೀಟು ಸಿಗುವ ಅವಕಾಶಗಳು ತಪ್ಪಿ ಹೋಗುತ್ತಿತ್ತು. ಈಗ ಮೈತ್ರಿ ಮುರಿದು ಬಿದ್ದುದರಿಂದ ಅವರಿಗೆಲ್ಲ ಖುಷಿಯೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News