ಮಾರ್ಚ್ 11ರ ಬಳಿಕ ಹೊಸ ಪಕ್ಷ ಕಟ್ಟುವೆ: ಶಿವಪಾಲ್ ಸಿಂಗ್
ಹೊಸದಿಲ್ಲಿ,ಜ.31: ಉತ್ತರ ಪ್ರದೇಶದ ಆಡಳಿತ ಪಕ್ಷ ಎಸ್‌ಪಿಯಲ್ಲಿನ ಕುಟುಂಬ ಕಲಹಕ್ಕೆ ತೆರೆ ಬಿದ್ದಿಲ್ಲ, ಬೀಳುವ ಲಕ್ಷಣಗಳೂ ಕಾಣುತ್ತಿಲ್ಲ. ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಶಿವಪಾಲ್ ಯಾದವ ಅವರು ಮಾ.11ರಂದು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಹೊಸ ಪಕ್ಷದ ಸ್ಥಾಪನೆಗೆ ಸಜ್ಜಾಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಮುಲಾಯಂ ಅವರು ತನ್ನ ಪುತ್ರ,ಮುಖ್ಯಮಂತ್ರಿ ಅಖಿಲೇಶ್ ಯಾದವ ವಶಪಡಿಸಿಕೊಂಡಿರುವ ಎಸ್‌ಪಿಯನ್ನು ಅಥವಾ ಸೋದರನ ಹೊಸಪಕ್ಷವನ್ನು ಆಯ್ಕೆಮಾಡಿಕೊಳ್ಳಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಎಸ್‌ಪಿ ಸದಸ್ಯರೇ ನನ್ನ ಮತ್ತು ನೇತಾಜಿ (ಮುಲಾಯಂ) ಯವರ ವಿರುದ್ಧ ಪದೇಪದೇ ದಾಳಿ ನಡೆಸುತ್ತಿದ್ದಾರೆ. ತಾವಿಂದು ಏನಾಗಿರುವೆವೋ ಅದಕ್ಕೆ ಮುಲಾಯಂ ಆಶೀರ್ವಾದವೇ ಕಾರಣ ಎಂದು ಹೇಳುತ್ತಿದ್ದವರೇ ಇಂದು ಅವರನ್ನು ಅವಮಾನಿಸು ತ್ತಿದ್ದಾರೆ ಎಂದು ಶಿವಪಾಲ್ ಹೇಳಿದರು.
ಇಂದು ಬೆಳಿಗ್ಗೆ ಶಿವಪಾಲ್ ಮುಂದಿನ ತಿಂಗಳು ನಡೆಯಲಿರುವ ಉ.ಪ್ರ.ವಿಧಾನಸಭಾ ಚುನಾವಣೆಗಾಗಿ ಎಸ್‌ಪಿ ಅಭ್ಯರ್ಥಿಯಾಗಿ ಪಕ್ಷದ ಸೈಕಲ್ ಚಿಹ್ನೆಯಡಿ ತನ್ನ ನಾಮಪತ್ರ ವನ್ನು ಸಲ್ಲಿಸಿದರು.