ಮಾಜಿ ಕೇಂದ್ರ ಸಚಿವ ಇ. ಅಹ್ಮದ್ ಇನ್ನಿಲ್ಲ
ಹೊಸದಿಲ್ಲಿ, ಫೆ.1: ಮಾಜಿ ಕೇಂದ್ರ ಸಚಿವ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖಂಡ ಇ.ಅಹ್ಮದ್ ಬುಧವಾರ ಮುಂಜಾನೆ ನಿಧನರಾದರು.
ಅವರು ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಹಿರಿಯ ವೈದ್ಯರು ಪ್ರಕಟಿಸಿದ್ದಾರೆ. ಅಹ್ಮದ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಆರ್‌ಎಂಎಲ್ ಆಸ್ಪತ್ರೆಗೆ ಅವರನ್ನು ನಿನ್ನೆ ದಾಖಲಿಸಲಾಗಿದ್ದು, ಬಳಿಕ ಜೀವಬೆಂಬಲ ವ್ಯವಸ್ಥೆಯಲ್ಲಿ ಇಡಲಾಗಿತ್ತು. ನಸುಕಿನ 2.15ರ ವೇಳೆಗೆ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಇಂದು ಕೇರಳಕ್ಕೆ ಒಯ್ಯಲಾಗುತ್ತಿದೆ.
ಕೇರಳದ ಮಲ್ಲಪುರಂ ಸಂಸದರಾಗಿರುವ ಅವರು, ನಿನ್ನೆ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ, ರಾಷ್ಟ್ರಪತಿಗಳು ಭಾಷಣ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ಮುಖಂಡ ಗುಲಾಂ ನಬಿ ಆಜಾದ್ ಮತ್ತು ಇತರರು ಅಹ್ಮದ್ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಆಸ್ಪತ್ರೆಗೆ ಧಾವಿಸಿದರು. ಆದರೆ ಮುಖಂಡರ ಭೇಟಿಗೆ ತಮಗೆ ಅವಕಾಶ ನೀಡಲಿಲ್ಲ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.