ಕೇಂದ್ರ ಸರಕಾರದಿಂದ ಇ.ಅಹ್ಮದ್‌ಗೆ ಅಗೌರವ: ಕೇರಳ ಸಿಎಂ ವಾಗ್ದಾಳಿ
ತಿರುವನಂತಪುರ, ಫೆ.1: ಕೇಂದ್ರದ ಮಾಜಿ ಸಚಿವ ಇ. ಅಹ್ಮದ್ ನಿಧನರಾದ ಕೆಲವೇ ಗಂಟೆ ಕಳೆದ ಬಳಿಕ ಕೇಂದ್ರ ಬಜೆಟ್ ಮಂಡಿಸಿರುವ ಕೇಂದ್ರದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
‘‘ಇದೊಂದು ಅಸಂಬದ್ಧ, ದುರಾದೃಷ್ಟಕರ ನಿರ್ಧಾರ ಹಾಗೂ ಬಜೆಟ್ ಮಂಡನೆ ಮೂಲಕ ಮೃತ ರಾಜಕೀಯ ಮುಖಂಡನಿಗೆ, ದೇಶದ ಪ್ರಜಾಪ್ರಭುತ್ವ ಪ್ರಜ್ಞೆಗೆ ಮಾಡಿರುವ ಅಗೌರವವಾಗಿದೆ. ಬಜೆಟ್ ಮಂಡಿಸಿರುವ ಕೇಂದ್ರ ಸರಕಾರ ಸಂಸತ್ ಸದಸ್ಯರ ಭಾವನೆಗೆ ಘಾಸಿ ಉಂಟು ಮಾಡಿದೆ’’ಎಂದು ವಿಜಯನ್ ಕೇಂದ್ರದ ವಿರುದ್ಧ ಕಿಡಿಕಾರಿದರು.
‘‘ಲೋಕಸಭೆಯ ಹಾಲಿ ಸದಸ್ಯರಾಗಿದ್ದ ಅಹ್ಮದ್ ಮಂಗಳವಾರ ಕುಸಿದು ಬಿದ್ದ್ದ ಸಂಸತ್‌ನ ಕಟ್ಟಡದಲ್ಲೇ ವಾರ್ಷಿಕ ಬಜೆಟ್ ಮಂಡಿಸಲಾಗಿದೆ. ಧೀಮಂತ ಹಿರಿಯ ನಾಯಕನಿಗೆ ಶ್ರದ್ದಾಂಜಲಿ ಅರ್ಪಿಸಿದ ಸದನದಲ್ಲಿ ಮಹತ್ವದ ಕೇಂದ್ರ ಬಜೆಟ್ ಮಂಡನೆ ಮಾಡಿರುವುದು ಮಹಾ ಪ್ರಮಾದ. ಐಯುಎಂಎಲ್ ಮುಖಂಡ ಅಹ್ಮದ್‌ರು ಎಲ್ಲ ಪಕ್ಷಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದರು’’ ಎಂದು ವಿಜಯನ್ ಹೇಳಿದ್ದಾರೆ.
‘‘ಇ.ಅಹ್ಮದ್ ನಿಧನದಿಂದ ತನ್ನ ಪಕ್ಷ ಮಾತ್ರವಲ್ಲ, ಅವರ ಕುಟುಂಬ ವರ್ಗ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ದುಃಖದೊಂದಿಗೆ ತಾನು ಭಾಗಿಯಾಗುವೆ’’ ಎಂದು ಫೇಸ್‌ಬುಕ್‌ನಲ್ಲಿ ವಿಜಯನ್ ತಿಳಿಸಿದ್ದರು.