×
Ad

ವಿವಿಯ ಬಹುತೇಕ ಹುದ್ದೆಗಳು ಈ ವರ್ಷ ಭರ್ತಿ

Update: 2017-02-03 00:17 IST

ಹೊಸದಿಲ್ಲಿ, ಫೆ.2: ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಲ್ಲಿ ಹೆಚ್ಚಿನ ಹುದ್ದೆಗಳಿಗೆ ಈ ವರ್ಷ ನೇಮಕಾತಿ ನಡೆಯಲಿದೆ ಎಂದು ಸರಕಾರ ತಿಳಿಸಿದೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್, ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇರುವ ಸೂಚನೆಯನ್ನು ಕಳೆದ ಆರೇಳು ವರ್ಷಗಳಿಂದ ಹಲವು ವಿಶ್ವವಿದ್ಯಾನಿಲಯಗಳು ಪಾಲಿಸಿಲ್ಲ . ಆದ್ದರಿಂದ ನೇಮಕಾತಿ ನಡೆದಿಲ್ಲ ಎಂದು ತಿಳಿಸಿದರು. ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಕರಣ್ ಸಿಂಗ್, ದೇಶದಾದ್ಯಂತ ವಿವಿಗಳಲ್ಲಿ ಮತ್ತು ಕಾಲೇಜುಗಳಲ್ಲಿ ಹುದ್ದೆಗಳು ಖಾಲಿ ಇದ್ದು ಇದೊಂದು ಸ್ಥಾನೀಯ ಸಮಸ್ಯೆಯಾಗಿ ಬಿಟ್ಟಿದೆ ಎಂದು ಹೇಳಿದರು. 2016ರ ಅ.1ರವರೆಗೆ, ಯುಜಿಸಿ ಅನುದಾನಿತ ವಿಶ್ವವಿದ್ಯಾನಿಲಯಗಳಲ್ಲಿ 6,080 ಶಿಕ್ಷಕ ಹುದ್ದೆ ಖಾಲಿಯಿದೆ. ಅಲ್ಲದೆ ಯುಜಿಸಿ ಅನುದಾನಿತ ಕಾಲೇಜುಗಳಲ್ಲಿ 3,315 ಶಿಕ್ಷಕರ ಹುದ್ದೆ ಖಾಲಿಯಿದೆ. ದಿಲ್ಲಿ ವಿವಿ ಸೇರಿದಂತೆ ಕೇಂದ್ರೀಯ ವಿವಿಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು ಖಾಲಿಯಿರುವ ಶಿಕ್ಷಕರನ್ನು ನೇಮಿಸುವ ಜವಾಬ್ದಾರಿ ಈ ವಿವಿ ಗಳದ್ದಾಗಿದೆ ಎಂದು ಸಚಿವರು ತಿಳಿಸಿದರು. ಖಾಲಿಯಿರುವ ಹುದ್ದೆಗಳನ್ನು ನಿಯಮಿತವಾಗಿ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದೇಶದಲ್ಲಿ ಸಂದರ್ಶನ ನಡೆಸುವ ಮೂಲಕ ದೇಶದ ಪ್ರತಿಭೆಗಳನ್ನು ಮರಳಿ ಕರೆಸಿಕೊಳ್ಳುವ ಬಗ್ಗೆ ಚಿಂತಿಸಲಾಗಿದೆ. ನೇಮಕಾತಿಯ ಸಂದರ್ಭ ಯುಜಿಸಿ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲಾಗುತ್ತದೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News