×
Ad

ಇಬ್ಬರು ಕಾಶ್ಮೀರಿ ಕ್ರೀಡಾಪಟುಗಳಿಗೆ ಅಮೆರಿಕ ವೀಸಾ ನಿರಾಕರಣೆ

Update: 2017-02-03 00:18 IST

ಹೊಸದಿಲ್ಲಿ, ಫೆ.2: ಇತ್ತೀಚೆಗೆ ಇಬ್ಬರು ಕಾಶ್ಮೀರಿ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿರುವುದು ಒಂದು ಸಾಮಾನ್ಯ ನಿರ್ಧಾರವಾಗಿದ್ದು, ಇದಕ್ಕೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರಡಿಸಿದ ಆದೇಶಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಅಮೆರಿಕ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಇಬ್ಬರು ಕಾಶ್ಮೀರಿ ಯುವಕರಿಗೆ ಅಮೆರಿಕ ವೀಸಾ ನಿರಾಕರಿಸಿದೆ ಎಂಬ ವಿಷಯದ ಬಗ್ಗೆ ವಿದೇಶ ವ್ಯವಹಾರ ಇಲಾಖೆಯು ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳಿಂದ ಮಾಹಿತಿ ಕೇಳಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. ಪ್ರಕರಣದ ಅರ್ಹತೆಯನ್ನು ಗಮನಿಸಿ ಕೈಗೊಳ್ಳಲಾದ ಸಾಮಾನ್ಯ ನಿರ್ಧಾರವಿದು. ಇದಕ್ಕೆ ಮತ್ತು ಅಧ್ಯಕ್ಷ ಟ್ರಂಪ್ ಹೊರಡಿಸಿದ ಆದೇಶಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದವರು ತಿಳಿಸಿದರು. ಸ್ಪರ್ಧಿಗಳು ವಿದೇಶ ವ್ಯವಹಾರ ಇಲಾಖೆಯನ್ನು ಸಂಪರ್ಕಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವ ಸ್ನೋ-ಶೂ ಚಾಂಪಿಯನ್‌ಷಿಪ್ (ಹಿಮದಲ್ಲಿ ನಡೆಯುವ ಒಂದು ಸ್ಪರ್ಧೆ)ನಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಕಾಶ್ಮೀರದ ಅಬೀದ್ ಖಾನ್ ಮತ್ತು ತನ್ವೀರ್ ಹುಸೈನ್ ಎಂಬ ಕ್ರೀಡಾಪಟುಗಳು ವೀಸಾ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಲಾಗಿತ್ತು ಮತ್ತು ಅಮೆರಿಕದ ಈಗಿನ ನೀತಿ ಪ್ರಕಾರ ವೀಸಾ ನಿರಾಕರಿಸಲಾಗಿದೆ ಎಂಬ ಕಾರಣವನ್ನು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News