×
Ad

ಖಾಲಿ ಹೊಟ್ಟೆಗೆ ಈ ಹಣ್ಣು ತಿಂದರೆ ನಿಮ್ಮ ಜೀವಕ್ಕೇ ಸಂಚಕಾರ!

Update: 2017-02-03 09:01 IST

ಹೊಸದಿಲ್ಲಿ, ಫೆ.3: ಮುಜಾಫರ್‌ ನಗರದ ಈ ಕುತೂಹಲಕಾರಿ ಮತ್ತು ವಿಸ್ಮಯದ ಪ್ರಕರಣ, ಸಂಶೋಧಕರು ಹಾಗೂ ವೈದ್ಯರನ್ನು ದಂಗುಬಡಿಸಿದೆ. ಸಕಾರಣವಿಲ್ಲದೇ ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಿದೆ.

ಕಳೆದ ಮೂರು ವರ್ಷಗಳಿಂದ ಕಡುಬೇಸಿಗೆಯಲ್ಲಿ ಅಂದರೆ ಮೇ ಮಧ್ಯದಲ್ಲಿ ಮಕ್ಕಳು ಸೆಳವು, ಅಧಿಕ ಜ್ವರ ಹಾಗೂ ಜೋರಾಗಿ ಬೊಬ್ಬೆ ಹೊಡೆಯುವ ಹಲವು ಪ್ರಕರಣಗಳು ವರದಿಯಾದವು. ಕೇವಲ ಮಕ್ಕಳು ಮಾತ್ರವಲ್ಲದೇ, ಯುವಕರು, ಆರೋಗ್ಯವಂತರು ಕೂಡಾ ಇದ್ದಕ್ಕಿದ್ದಂತೆ ಪ್ರಜ್ಞಾಹೀನರಾಗುವ ಪರಿಸ್ಥಿತಿ ಎದುರಾಗಿತ್ತು. ವಿಚಿತ್ರವೆಂದರೆ ಮುಂಗಾರು ಆರಂಭವಾದಂತೆ ಸಮಸ್ಯೆ ಮಾಯವಾಗುತ್ತಿತ್ತು.

ಇದು ಬಿಸಿಲಿನ ಝಳದಿಂದಾದ ಸಮಸ್ಯೆ ಎಂದು ಕೆಲವರು ಹೇಳಿದರೆ, ಕೀಟಗಳಿಂದಾಗುವ ಸೋಂಕು ಎಂದು ಮತ್ತೆ ಕೆಲವರು, ಕೀಟನಾಶಕದ ಪರಿಣಾಮ ಎಂದು ಇನ್ನು ಕೆಲವರು ವಿಶ್ಲೇಷಿಸಿದರು. ಆದರೆ ಇದನ್ನು ಪರಿಹರಿಸುವುದು ಸಾಧ್ಯವಾಗಲಿಲ್ಲ. ಏಕೆಂದರೆ ಯಾವ ರೋಗಲಕ್ಷಣವೂ ಕಾಣಿಸಿಕೊಳ್ಳುತ್ತಿರಲಿಲ್ಲ.

ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಸೆಂಟರ್ಸ್‌ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಇನ್ ಅಟ್ಲಾಂಟಾ ಸಂಯುಕ್ತವಾಗಿ ನಡೆಸಿದ ಸಂಶೋಧನಾ ವರದಿ ಈ ಚಿದಂಬರ ರಹಸ್ಯವನ್ನು ಬಿಡಿಸಿದೆ. ಲಿಚಿ ಹಣ್ಣನ್ನು ಅಶಕ್ತ ಮಕ್ಕಳು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದು ಸಾವಿಗೆ ಕಾರಣವಾಗಬಹುದು ಎಂದು ಈ ಸಂಶೋಧನಾ ವರದಿ ಪ್ರತಿಪಾದಿಸಿದೆ.

2015ರಲ್ಲಿ ಆರೋಗ್ಯ ಅಧಿಕಾರಿಗಳು ಪೋಷಕರಿಗೆ ಸೂಚನೆ ನೀಡಿ, ಹಣ್ಣಿನ ಬದಲಾಗಿ, ಹೊಟ್ಟೆತುಂಬಾ ಊಟವನ್ನು ಸಂಜೆ ಕೂಡಾ ಮಕ್ಕಳಿಗೆ ನೀಡುವಂತೆ ಸಲಹೆ ಮಾಡಿದರು. ಇದರಿಂದಾಗಿ ಸಾಯುವ ಮಕ್ಕಳ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಯಿತು.

ಬಿಳಿ ರಕ್ತಕಣದ ಕೊರತೆ, ರಕ್ತದಲ್ಲಿ ಕಡಿಮೆ ಸಕ್ಕರೆ ಅಂಶದಿಂದಾಗಿ ಮೆದುಳು ಊದಿಕೊಳ್ಳುವ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಟ್ಲಾಂಟ ಸಹೋದ್ಯೋಗಿಗಳ ಜತೆ ಟೆಲಿಕಾನ್ಫರೆನ್ಸ್ ಮಾಡಿದಾಗ ಇದೇ ಬಗೆಯ ರೋಗವನ್ನು ಜಮೈಕನ್ ವಮಿಟಿಂಗ್ ಸಿಕ್‌ನೆಸ್ ಎಂದು ವಿವರಿಸಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿದಾಗ ಮಕ್ಕಳ ಸಾವಿನ ರಹಸ್ಯ ಬಹಿರಂಗವಾಗಿದೆ. ದೇಶದಲ್ಲಿ ಒಟ್ಟುಬೆಳೆಯುವ ಲಿಚಿ ಹಣ್ಣಿನ ಶೇಕಡ 70ನ್ನು ಮುಜಾಫರ್‌ಪುರದಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಮೆಥಿಲೆನೆಸೈಕ್ಲೋಪ್ರೊಪೈಲ್ ಗ್ಲೈಸಿನ್ ಎಂಬ ಅಂಶ ಅಧಿಕವಾಗಿರುವುದು ಇದಕ್ಕೆ ಕಾರಣ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಮಕ್ಕಳು ಸಂಪೂರ್ಣ ಹಣ್ಣಾಗದ ಲಿಚಿಯನ್ನು ಸೇವಿಸುವುದರಿಂದ ಈ ಸಮಸ್ಯೆ ಕಂಡುಬಂದಿದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಲಿಚಿ ಹಣ್ಣು ಸೇವಿಸುವುದು ಅಪಾಯಕಾರಿ ಎಂಬ ನಿರ್ಧಾರಕ್ಕೆ ವೈದ್ಯರು ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News