ಹೈಕೋರ್ಟ್ ಕೈಯಲ್ಲಿ ಪ್ರಜ್ಞಾ ಭವಿಷ್ಯ
ಹೊಸದಿಲ್ಲಿ, ಫೆ.3: ಮಾಲೆಗಾಂವ್‌ನಲ್ಲಿ 2008ರಂದು ನಡೆದ ಸ್ಫೋಟ ಪ್ರಕರಣದ ಸಂಬಂಧ ಸಾಧ್ವಿ ಪ್ರಜ್ಞಾ ಠಾಕೂರ್ ಸಲ್ಲಿಸಿರುವ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸುವ ತನ್ನ ನಿಲುವಿಗೆ ರಾಷ್ಟ್ರೀಯ ತನಿಖಾ ತಂಡ ಅಂಟಿಕೊಂಡಿದ್ದು, ಆರೋಪಿಯ ಭವಿಷ್ಯ ಫೆಬ್ರವರಿ 7ರಂದು ಮುಂಬೈ ಹೈಕೋರ್ಟ್ ನೀಡುವ ತೀರ್ಪನ್ನು ಅವಲಂಬಿಸಿದೆ.
ಸುನಿಲ್ ಜೋಶಿ ಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತಗೊಳ್ಳುವ ಸಾಧ್ಯತೆ ಇದ್ದರೂ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪ ಉಳಿಯಲಿದೆ. ಈ ಕಾರಣದಿಂದ ತಮ್ಮ ಜಾಮೀಜು ಅರ್ಜಿ ತಿರಸ್ಕರಿಸಿ, ಎನ್‌ಐಎ ವಿಶೇಷ ನ್ಯಾಯಾಲಯ 2016ರ ಜೂನ್‌ನಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಪ್ರಜ್ಞಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಎನ್‌ಐಎ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ಎನ್‌ಐಎ ಮೂಲಗಳು ಹೇಳಿವೆ. ಈ ಸ್ಫೋಟ ಘಟನೆಯಲ್ಲಿ 6 ಮಂದಿ ಮೃತಪಟ್ಟು 101 ಮಂದಿ ಗಾಯಗೊಂಡಿದ್ದರು. ಪ್ರಜ್ಞಾ ಈ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಪ್ರಬಲ ಸಾಕ್ಷಿಗಳಿಲ್ಲ ಎಂದು ಎನ್‌ಐಎ ಅಭಿಪ್ರಾಯಪಟ್ಟಿತ್ತು.
ಈ ಸಂಬಂಧ ಎನ್‌ಐಎ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದರೂ, ವಿಶೇಷ ನ್ಯಾಯಾಲಯ ಪ್ರಜ್ಞಾ ಜಾಮೀನು ಅರ್ಜಿ ತಿರಸ್ಕರಿಸಿತ್ತು.