ನಾಗಾಲ್ಯಾಂಡ್‌ನಲ್ಲಿ ಭುಗಿಲೆದ್ದ ಹಿಂಸಾಚಾರ; ಸರಕಾರಿ ಕಚೇರಿಗಳಿಗೆ ಬೆಂಕಿ
ಕೋಹಿಮಾ, ಫೆ.3: ಮಂಗಳವಾರ ಪ್ರತಿಭಟನಾನಿರತರಾಗಿದ್ದ ಇಬ್ಬರು ಪೊಲೀಸ್ ಗುಂಡಿಗೆ ಬಲಿಯಾದ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ರಾಜಧಾನಿ ಕೋಹಿಮಾದಲ್ಲಿ ಗುರುವಾರ ವ್ಯಾಪಕ ಹಿಂಸಾಚಾರ ನಡೆದಿದೆ.
ನಾಗಾಲ್ಯಾಂಡ್ ಬುಡಕಟ್ಟು ಕ್ರಿಯಾ ಮಂಡಳಿ ಎಂಬ ಸಂಘಟನೆ ಒಕ್ಕೂಟವನ್ನು ರಚಿಸಲಾಗಿದ್ದು, ಮುಖ್ಯಮಂತ್ರಿ ಟಿ.ಆರ್.ಝೈಲಿಂಗ್ ಅವರಿಗೆ ಮೂರು ಆಗ್ರಹಗಳ ಪಟ್ಟಿಯನ್ನು ನೀಡಲಾಗಿದೆ. ಇವುಗಳನ್ನು ಈಡೇರಿಸಲು ಸಂಜೆ 4 ಗಂಟೆಯ ಗಡುವು ನೀಡಲಾಗಿತ್ತು. ಸರಕಾರಕ್ಕೆ ಈ ಬಗ್ಗೆ ಯೋಚಿಸಲು ಸಮಯಾವಕಾಶವೇ ಇಲ್ಲದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಹಿಂಸಾಚಾರ ಭುಗಿಲೆದ್ದಿದೆ.
ಕೋಹಿಮಾದಲ್ಲಿ ಸೇನೆಗೆ ಬುಲಾವ್ ನೀಡಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲ ಮೊಬೈಲ್ ಸೇವೆಯನ್ನು ತಕ್ಷಣದಿಂದ ರದ್ದು ಮಾಡಲಾಗಿದೆ.
ಉದ್ರಿಕ್ತರ ಗುಂಪು ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದಲ್ಲದೇ ಕೋಹಿಮಾ ಮಹಾನಗರಪಾಲಿಕೆ ಕಚೇರಿಗೆ ಬೆಂಕಿ ಹಚ್ಚಿತು. ರಾಜ್ಯ ಮಾಹಿತಿ ಆಯೋಗ, ನಗರಾಭಿವೃದ್ಧಿ ಇಲಾಖೆ, ರೈಲ್ವೆ ಮುಂಗಡ ಕಾಯ್ದಿರಿಸುವಿಕೆ ಕೇಂದ್ರ, ಕೋಹಿಮಾ ಪ್ರೆಸ್‌ಕ್ಲಬ್‌ಗೆ ಕೂಡಾ ಹಾನಿಯಾಗಿದ್ದು, ಹಲವು ಅಮೂಲ್ಯ ದಾಖಲೆಗಳು ಭಸ್ಮವಾಗಿವೆ.
ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಖ್ಯಮಂತ್ರಿ ನಿವಾಸದ ಮುಂದೆ ಮತ್ತು ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶ್ಚುಹೋಜಿಲ್ ಮನೆ ಮುಂದೆ ಮೃತದೇಹಗಳನ್ನು ಇಟ್ಟು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದಾರೆ.