ಹಫೀಜ್ ಸಯೀದ್ ವಿರುದ್ಧದ ತನಿಖೆಗೆ ಪಾಕ್ ಬಳಿ ಪುರಾವೆ: ಭಾರತ
ಹೊಸದಿಲ್ಲಿ,ಫೆ.3: ಮುಂಬೈ ದಾಳಿ ಪ್ರಕರಣದ ರೂವಾರಿ ಹಾಗೂ ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧದ ತನಿಖೆಗೆ ಬೇಕಾದ ಎಲ್ಲ ಪುರಾವೆಗಳು ಪಾಕಿಸ್ತಾನದ ಬಳಿ ಇದೆ. ಇದೀಗ ಪಾಕಿಸ್ತಾನ 26/11 ದಾಳಿಯ ಬಗ್ಗೆ ಸಮಗ್ರ ತನಿಖೆಗೆ ಸಹಕರಿಸುವ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕಿದೆ ಎಂದು ಭಾರತ ಹೇಳಿದೆ.
ಇಡೀ ದಾಳಿಗೆ ಸಂಚು ನಡೆದದ್ದು ಪಾಕಿಸ್ತಾನದಲ್ಲಿ; ದಾಳಿಯಲ್ಲಿ ಪಾಲ್ಗೊಂಡ ಬಹುತೇಕ ಎಲ್ಲರೂ ಪಾಕಿಸ್ತಾನಿಯರು. ಈ ಹಿನ್ನೆಲೆಯಲ್ಲಿ ಎಲ್ಲ ಪುರಾವೆಗಳು ಪಾಕಿಸ್ತಾನದಲ್ಲೇ ಇವೆ ಎಂದು ಭಾರತ ಪ್ರತಿಪಾದಿಸಿದೆ.
ಮಾನವೀಯ ಆಧಾರದಲ್ಲಿ ಪಾಕಿಸ್ತಾನ ಇತ್ತೀಚೆಗೆ ಗಡಿನಿಯಂತ್ರಣ ರೇಖೆ ದಾಟಿದ ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿದ ಕ್ರಮವನ್ನು ಭಾರತ ಸ್ವಾಗತಿಸುತ್ತದೆ. ಅಂತೆಯೇ ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿ, ಸಯೀದ್ ವಿರುದ್ಧದ ತನಿಖೆಯಲ್ಲಿ ವಿಶ್ವಾಸಾರ್ಹ ಸಹಕಾರ ನೀಡಬೇಕಿದೆ ಎಂದು ಹೇಳಿದೆ.
ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳನ್ನು ಎಸಗಿರುವುದಾಗಿ ಹಫೀಜ್ ಈಗಾಗಲೇ ತಪ್ಪೊಪ್ಪಿಕೊಂಡಿದ್ದಾನೆ. ಪಾಕಿಸ್ತಾನ ಬಯಸುವ ದಾಖಲೆಗಳು ಈಗ ಆ ದೇಶದ ಬಳಿಯೇ ಇರುವುದು ಇದರಿಂದ ಸ್ಪಷ್ಟವಾಗಿದೆ. ಇದೀಗ ಆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿಕೆ ನೀಡಿದ್ದಾರೆ.