ಮಹಿಳೆಯ ಮೂಗಿನಿಂದ ಜೀವಂತ ಜಿರಳೆ ಹೊರತೆಗೆದ ವೈದ್ಯರು!
ಚೆನ್ನೈ, ಫೆ.3: ಮಹಿಳೆಯೊಬ್ಬರ ಮೂಗಿನ ಆಳದಲ್ಲಿ ಸೇರಿಕೊಂಡಿದ್ದ ಜೀವಂತ ಜಿರಳೆಯೊಂದನ್ನು ಸ್ಟಾನ್ಲಿ ಮೆಡಿಕಲ್ ಕಾಲೇಜ್‌ನ ವೈದ್ಯರು ಯಶಸ್ವಿಯಾಗಿ ಹೊರ ತೆಗೆದ ಘಟನೆ ಗುರುವಾರ ನಡೆದಿದೆ. ನನ್ನ 30 ವರ್ಷಗಳ ವೃತ್ತಿಬದುಕಿನಲ್ಲಿ ನಾನು ನೋಡಿದ ಮೊದಲ ಕೇಸ್ ಇದಾಗಿದೆ. ಜಿರಳೆಯನ್ನು ಹೊರ ತೆಗೆಯುವ ಅತ್ಯಂತ ಸೂಕ್ಷ್ಮ ಪ್ರಕ್ರಿಯೆಗೆ 45 ನಿಮಿಷಬೇಕಾಯಿತು. ಮೂಗಿನ ಎಂಡೊಸ್ಕೊಪ್ ಹಾಗೂ ಸೋಂಕುನಿರೋಧಕ ತಂತ್ರದಿಂದ ಜಿರಳೆಯನ್ನು ಹೊರ ತೆಗೆಯಲಾಯಿತು ಎಂದು ಆಸ್ಪತ್ರೆಯ ಎನ್ ಆ್ಯಂಡ್ ಟಿ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎನ್. ಶಂಕರ್ ಹೇಳಿದ್ದಾರೆ.
42ರ ಪ್ರಾಯದ ಮನೆ ಕೆಲಸದಾಕೆ ಸೆಲ್ವಿ ಮಂಗಳವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮೂಗಿನೊಳಗೆ ಜಿರಳೆಯೊಂದು ಪ್ರವೇಶಿಸಿತ್ತು. ಮೂಗಿನ ಒಳಗೆ ಹೋಗಿದ್ದ ಜಿರಳೆ ಹಿಂದಕ್ಕೆ ಬರಲಾಗದೆ ಎರಡು ಕಣ್ಣು ಹಾಗೂ ಮೆದುಳಿನ ಸಮೀಪ ಸಿಕ್ಕಿಹಾಕಿಕೊಂಡಿತ್ತು. ಮಧ್ಯರಾತ್ರಿ ಸುಮಾರಿಗೆ ಸೆಲ್ವಿ ಅವರಿಗೆ ಮೂಗಿನಲ್ಲಿ ತೊಂದರೆ ಕಾಣಿಸಿಕೊಳ್ಳಲಾರಂಭಿಸಿತು. ನೋವು ಜೋರಾಗಿತ್ತು. ಸೆಲ್ವಿ ಅವರ ಅಳಿಯ ತಕ್ಷಣವೇ ಸ್ಥಳೀಯ ಕ್ಲಿನಿಕ್‌ಗೆ ತೆರಳಿದ್ದರು. ಆ ಕ್ಲಿನಿಕ್‌ನವರು ಮತ್ತೊಂದು ಕ್ಲಿನಿಕ್‌ಗೆ ತೆರಳುವಂತೆ ಸೂಚಿಸಿದ್ದರು. ಅಂತಿಮವಾಗಿ ಬುಧವಾರ ಬೆಳಗ್ಗೆ ಸ್ಟಾನ್ಲಿ ಆಸ್ಪತ್ತೆಗೆ ದಾಖಲಿಸಲಾಗಿತ್ತು.
ಕ್ಲಿನಿಕ್ ಡಾಕ್ಟರ್‌ವೊಬ್ಬರು ಮೂಗಿನೊಳಗೆ ಚರ್ಮ ಬೆಳೆದಿರುವ ಕಾರಣ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದರು. ಆದರೆ, ನಾನು ವೈದ್ಯರ ಬಳಿ ಮೂಗಿನೊಳಗೆ ಏನೋ ಇದ್ದ ಭಾಸವಾಗುತ್ತಿದೆ ಎಂದು ಹೇಳಿದ್ದೆ. ಇದೀಗ ನಾನು ನಿರಾಳವಾಗಿದ್ದೇನೆ’’ ಎಂದು ಸೆಲ್ವಿ ಹೇಳಿದ್ದಾರೆ. ಸ್ಟಾನ್ಲಿ ಆಸ್ಪತ್ರೆಯ ಸರ್ಜನ್‌ಗಳು ಈ ಮೊದಲು ರೋಗಿಯ ಮೂಗು ಹಾಗೂ ಕಿವಿಯೊಳಗೆ ಸೇರಿಕೊಂಡಿದ್ದ ಕೀಟಗಳನ್ನು ಹೊರ ತೆಗೆದಿದ್ದರು. ಸೆಲ್ವಿ ಮೂಗಿನೊಳಗೆ ಸೇರಿಕೊಂಡಿದ್ದ ಜಿರಳೆ ಜೀವಂತವಾಗಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದರು.
‘‘ಮೂಗಿನ ಎಂಡೋಸ್ಕೊಪ್ ಮೂಲಕ ಪರೀಕ್ಷೆ ಮಾಡಿದಾಗ ಜೀವಂತ ಜಿರಳೆಯೊಂದು ಮಹಿಳೆಯ ಕಣ್ಣುಗಳ ಮಧ್ಯೆ ಹಾಗೂ ಮೆದುಳಿನ ಸನಿಹ ಸಿಲುಕಿಹಾಕಿಕೊಂಡಿರುವುದು ಪತ್ತೆಯಾಗಿದೆ. ಮೂಗಿನಲ್ಲಿ ಏನಾದರೂ ಸಿಲುಕಿಕೊಂಡರೆ ಪತ್ತೆಯಾಗುವುದು ತುಂಬಾ ಕಡಿಮೆ. ಮಹಿಳೆಯೊಬ್ಬರ ಮೂಗಿನಲ್ಲಿ ಜೀವಂತ ಜಿರಳೆ ಇರುವುದು ತುಂಬಾ ಅಚ್ಚರಿಯ ವಿಷಯವಾಗಿತ್ತು. ಒಂದು ವೇಳೆ ಜಿರಳೆಯನ್ನು ಹೊರ ತೆಗೆಯದೇ ಇದ್ದರೆ ಅದು ಅಲ್ಲಿ ಸತ್ತುಹೋಗಿ ಸೆಲ್ವಿಯ ಮೆದುಳಿಗೆ ಇನ್‌ಫೆಕ್ಷನ್ ಆಗುವ ಸಾಧ್ಯತೆಯಿತ್ತು’’ಎಂದು ಡಾ. ಶಂಕರ್ ತಿಳಿಸಿದ್ದಾರೆ.