×
Ad

ಡಿಜಿಪಿ ಪಾಂಡೆಗೆ ಸೇವಾವಧಿ ವಿಸ್ತರಣೆ : ಗುಜರಾತ್ ಸರಕಾರದಿಂದ ಉತ್ತರ ಕೇಳಿದ ಸುಪ್ರೀಂ ಕೋರ್ಟ್

Update: 2017-02-03 20:41 IST

ಹೊಸದಿಲ್ಲಿ,ಜ.3: ಇಷ್ರತ್ ಜಹಾಂ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಡಿಜಿಪಿ ಪಿ.ಪಿ.ಪಾಂಡೆ ಅವರಿಗೆ ಭಡ್ತಿ ಮತ್ತು ಮೂರು ತಿಂಗಳ ಸೇವಾ ವಿಸ್ತರಣೆಯನ್ನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಗುಜರಾತ್ ಸರಕಾರಕ್ಕೆ ನಿರ್ದೇಶ ನೀಡಿದೆ.

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಪಾಂಡೆ ಅವರಿಗೆ ಜಾಮೀನು ನೀಡಲಾಗಿದೆ ಮತ್ತು ಅವರನ್ನು ಮರುನೇಮಕ ಮಾಡಿಕೊಂಡು, ಭಡ್ತಿ ಹಾಗೂ ಸೇವಾವಧಿ ವಿಸ್ತರಣೆ ನೀಡಿ ಪುರಸ್ಕರಿಸಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹೇಳಿದರು. ಜ.31ರಂದು ನಿವೃತ್ತರಾಗಲಿದ್ದ ಪಾಂಡೆಯವರಿಗೆ ಕೇಂದ್ರದ ನೇಮಕಾತಿ ಕುರಿತ ಸಂಪುಟ ಸಮಿತಿಯು ಮೂರು ತಿಂಗಳ ಸೇವಾವಧಿಯನ್ನು ಮಂಜೂರು ಮಾಡಿತ್ತು.

2004,ಜೂನ್ 15ರಂದು ಅಹ್ಮದಾಬಾದ್‌ನ ಹೊರವಲಯದಲ್ಲಿ ಪೊಲೀಸರು ನಡೆಸಿದ್ದ ಎನ್‌ಕೌಂಟರ್‌ನಲ್ಲಿ ಇಷ್ರತ್ ಸೇರಿದಂತೆ ನಾಲ್ವರು ಕೊಲ್ಲಲ್ಪಟ್ಟಾಗ ಪಾಂಡೆ ರಾಜ್ಯ ಕ್ರೈಂ ಬ್ರಾಂಚ್‌ನ ಮುಖ್ಯಸ್ಥರಾಗಿದ್ದರು. ಮೃತರು ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಗುಜರಾತ್ ಪೊಲೀಸರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News