×
Ad

ರದ್ದುಗೊಂಡ ನೋಟು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ : ಲೋಕಸಭೆಯಲ್ಲಿ ಮಸೂದೆ ಮಂಡನೆ

Update: 2017-02-03 21:48 IST

ಹೊಸದಿಲ್ಲಿ, ಫೆ.3: ಅಪವೌಲ್ಯಗೊಂಡ 500 ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹೊಂದಿರುವುದು, ಅದನ್ನು ವರ್ಗಾಯಿಸುವುದು ಅಥವಾ ಸ್ವೀಕರಿಸುವುದು ಇನ್ನು ಮುಂದೆ ಶಿಕ್ಷಾರ್ಹ ಅಪರಾಧವಾಗಲಿದೆ.

ಈ ನಿಟ್ಟಿನಲ್ಲಿ ಸರಕಾರವು ಇಂದು ಲೋಕಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿತು. ಇದರಂತೆ ಅಪರಾಧಿಗಳಿಗೆ ಶಿಕ್ಷೆಯ ಜೊತೆಗೆ 10 ಸಾವಿರ ರೂ. ದಂಡ ವಿಧಿಸಬಹುದಾಗಿದೆ.

  ನಿರ್ದಿಷ್ಟ ಬ್ಯಾಂಕ್ ನೋಟುಗಳ (ಬಾಧ್ಯತೆ ಸಮಾಪ್ತಿ) ಮಸೂದೆ ಎಂಬ ಹೆಸರಿನ ಮಸೂದೆಯನ್ನು ವಿತ್ತ ಸಚಿವ ಅರುಣ್ ಜೇಟ್ಲೀ, ತೃಣಮೂಲ ಕಾಂಗ್ರೆಸ್ ಪಕ್ಷದ ತೀವ್ರ ವಿರೋಧದ ನಡುವೆ ಮಂಡಿಸಿದರು. ಸರಕಾರದ ಈ ಕ್ರಮ ಅಕ್ರಮ ಮತ್ತು ರಾಷ್ಟ್ರವಿರೋಧಿ ಎಂದು ತೃಣಮೂಲ ಕಾಂಗ್ರೆಸ್ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದೆ. ಈ ಮಸೂದೆಯು ಅಮಾನ್ಯಗೊಳಿಸಿದ ಬ್ಯಾಂಕ್ ನೋಟುಗಳ ಕುರಿತು ಸರಕಾರಕ್ಕೆ ಮತ್ತು ರಿಸರ್ವ್ ಬ್ಯಾಂಕ್‌ಗೆ ಇರುವ ಬಾಧ್ಯತೆಯನ್ನು ಸಮಾಪ್ತಿಗೊಳಿಸುತ್ತದೆ.

  ಈ ಮಸೂದೆ ಅಂಗೀಕರಿಸಲ್ಪಟ್ಟರೆ, 2016ರ ಡಿಸೆಂಬರ್ 30ರಂದು ಜಾರಿಗೊಳಿಸಲಾದ ಆಧ್ಯಾದೇಶವನ್ನು ಬದಿಗೊತ್ತಲಿದೆ. ಈ ಆಧ್ಯಾದೇಶದ ಪ್ರಕಾರ ಅಮಾನ್ಯಗೊಂಡ 500 ಅಥವಾ ಸಾವಿರ ಮುಖಬೆಲೆಯ 10 ನೋಟುಗಳನ್ನು ಹೊಂದಿದ್ದರೆ ಅವರಿಗೆ 10 ಸಾವಿರ ರೂ. ಅಥವಾ ಹೊಂದಿರುವ ಹಣದ ಐದು ಪಟ್ಟು -ಇವೆರಡರಲ್ಲಿ ಯಾವುದು ಅಧಿಕವೋ ಅದನ್ನು ದಂಡವಾಗಿ ವಿಧಿಸಲಾಗುತ್ತದೆ. ಅಮಾನ್ಯಗೊಂಡ ನೋಟುಗಳನ್ನು ಅಧ್ಯಯನ, ಸಂಶೋಧನೆ ಅಥವಾ ನಾಣ್ಯಶಾಸ್ತ್ರ ಕಾರ್ಯಗಳಿಗೆ ಇಟ್ಟುಕೊಳ್ಳಲು ಬಯಸುವವರಿಗೆ ದಂಡದಿಂದ ವಿನಾಯಿತಿ ನೀಡಲಾಗುವುದು. ಆದರೆ ಅವರು (ಮುಖಬೆಲೆ ಪರಿಗಣಿಸದೆ) 25 ನೋಟುಗಳನ್ನು ಮಾತ್ರ ಹೊಂದಿರಲು ಅವಕಾಶವಿದೆ.

ವಿತ್ತೀಯ ವ್ಯವಸ್ಥೆಯಲ್ಲಿ ಇರುವ ಲೆಕ್ಕಕ್ಕೆ ಸಿಗದ ಹಣ ಮತ್ತು ನಕಲಿ ನೋಟುಗಳನ್ನು ತೊಡೆದುಹಾಕಲು ರಿಸರ್ವ್ ಬ್ಯಾಂಕ್ ಮಾಡಿದ ಶಿಫಾರಸ್ಸಿನ ಮೇರೆಗೆ ನೋಟು ಅಮಾನ್ಯಗೊಳಿಸುವ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, 2016ರ ನ.9ರಿಂದ ಡಿ.30ರ ಅವಧಿಯಲ್ಲಿ ವಿದೇಶದಲ್ಲಿ ಇದ್ದ ಭಾರತೀಯ ಪ್ರಜೆ, ತನ್ನಲ್ಲಿರುವ ಅಮಾನ್ಯಗೊಂಡ ನೋಟುಗಳನ್ನು ರಿಸರ್ವ್ ಬ್ಯಾಂಕ್ ರೂಪಿಸಿರುವ ನಿಯಮಾವಳಿ ಪ್ರಕಾರ ಬದಲಾಯಿಸಲು ಅವಕಾಶವಿದೆ ಎಂದೂ ಮಸೂದೆ ತಿಳಿಸಿದೆ. ಮಸೂದೆ ಮಂಡನೆಗೆ ತೃಣಮೂಲ ಕಾಂಗ್ರೆಸ್‌ನ ಮುಖಂಡ ಸುಗತ ರಾಯ್ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಅವರಿಗೂ ಜೇಟ್ಲೀಗೂ ಮಾತಿನ ಚಕಮಕಿ ನಡೆಯಿತು. ನೀವು ಯಾವ ಆಧಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂದು ಜೇಟ್ಲೀ ಪ್ರಶ್ನಿಸಿದರು. ಇದಕ್ಕೆ ಉತ್ತರವಾಗಿ ರಾಯ್, ಜೇಟ್ಲೀ ಲೋಕಸಭೆಯ ಸದಸ್ಯರಲ್ಲ. ಆದ್ದರಿಂದ ಅವರಿಗೆ ಲೋಕಸಭೆಯ ನಿಯಮಗಳ ಅರಿವಿಲ್ಲ ಎಂದು ಕುಟುಕಿದರು. ಜೇಟ್ಲೀ ರಾಜ್ಯಸಭೆಯ ಸದಸ್ಯರು.

ಇದನ್ನು ಆಳುವ ಪಕ್ಷದ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು. ಜೇಟ್ಲೀ ಅತ್ಯುತ್ತಮ ಸಂಸದೀಯ ಪಟು ಎಂದು ಗುರುತಿಸಲ್ಪಟ್ಟವರು. ಅವರು ಸಚಿವ ಸಂಪುಟದ ಒಂದು ಪ್ರತಿಷ್ಠಿತ ಸದಸ್ಯ ಎಂದು ಸಂಸದೀಯ ವ್ಯವಹಾರ ಸಚಿವ ಅನಂತ ಕುಮಾರ್ ಹೇಳಿದರು.

 ನೋಟು ಅಮಾನ್ಯಗೊಳಿಸುವ ಮೊದಲು ಸರಕಾರ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಅಲ್ಲದೆ ಈ ನಿರ್ಧಾರವನ್ನು ರಿಸರ್ವ್ ಬ್ಯಾಂಕ್ ತೆಗೆದುಕೊಳ್ಳುವ ಬದಲು ಪ್ರಧಾನಿ ಮೋದಿ ಕೈಗೊಂಡಿರುವುದು ಸರಿಯಲ್ಲ ಎಂದು ರಾಯ್ ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲೀ, ಸೂಕ್ತ ಅಧಿಸೂಚನೆ ಹೊರಡಿಸಿದ ಬಳಿಕವೇ ಸರಕಾರ ಈ ಕ್ರಮ ಕೈಗೊಂಡಿದೆ. ರಾಯ್ ಅವರು ಈಗ ಕಲಿಯಲು ಆರಂಭಿಸಿದ್ದು ಇದು ಸಂಸದ್ ಸದಸ್ಯನಾಗಿ ಅವರ ಅನುಭವಕ್ಕೆ ಪೂರಕವಾಗಲಿದೆ ಎಂದು ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News