×
Ad

​ಮೆಡಿಕಲ್, ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬಗ್ಗೆ ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು

Update: 2017-02-04 09:11 IST

ಹೊಸದಿಲ್ಲಿ, ಫೆ.4: ಮೆಡಿಕಲ್, ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕೇವಲ ಪ್ರವೇಶ ಪರೀಕ್ಷೆ ಅಂಕದಿಂದಲೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವುದನ್ನು ಬಿಟ್ಟು ಸಮಗ್ರ ಮಾರ್ಗಸೂಚಿ ಸಿದ್ಧಪಡಿಸುವಂತೆ ಸರ್ಕಾರಕ್ಕೆ ಸಲಹೆ ಮಾಡಿದೆ.

ಇದರ ಬದಲಾಗಿ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಕ್ಕೆ ಶೇಕಡ 40ರಷ್ಟು ಹಾಗೂ ಬೋರ್ಡ್ ಪರೀಕ್ಷೆಯಲ್ಲಿ ಪಡೆದ ಅಂಕವನ್ನು ಶೇಕಡ 60ರಷ್ಟು ಪರಿಗಣಿಸಿ, ವಿದ್ಯಾರ್ಥಿಗಳನ್ನು ಪ್ರವೇಶಕ್ಕೆ ಪಟ್ಟಿ ಮಾಡುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. "ಪ್ರವೇಶ ಪರೀಕ್ಷೆಯ ಆಧಾರದಲ್ಲೇ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ನಾವು ಆದೇಶ ನೀಡುವಂತಿಲ್ಲ. ಬದಲಾಗಿ, ಸರ್ಕಾರ ಇದನ್ನು ನಿಯಂತ್ರಿಸುವ ಸಂಬಂಧ ಮಾರ್ಗಸೂಚಿ ರಚಿಸಬೇಕು" ಎಂದು ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎ.ಕೆ.ಗೋಯಲ್ ಹಾಗೂ ಯು.ಯು.ಲಲಿತ್ ಅವರನ್ನು ಒಳಗೊಂಡ ನ್ಯಾಯಪೀಠ, ಪ್ರವೇಶ ಪರೀಕ್ಷೆಯ ಕೋಚಿಂಗ್‌ಗಾಗಿ ಖಾಸಗಿ ಕೇಂದ್ರಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ. ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆಯೂ ಕೇಂದ್ರಕ್ಕೆ ಸೂಚಿಸಿದೆ.

ಸಿಪಿಎಂನ ವಿದ್ಯಾರ್ಥಿ ಘಟಕವಾದ ಎನ್‌ಎಫ್‌ಐ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂಥ ಸಂಸ್ಥೆಗಳಿಗೆ ಕಡಿವಾಣ ಹಾಕುವಂತೆ ಆದೇಶ ಮಾಡಿದೆ. ಇಂಥ ಕೇಂದ್ರಗಳು ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News