×
Ad

ಸಿಎಂ ಮೂಲಕ ಶಶಿಕಲಾ ಮಾಡುತ್ತಿರುವುದೇನು ?

Update: 2017-02-04 10:52 IST

ಚೆನ್ನೈ, ಫೆ.4: ಅತ್ಯಂತ ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಕಾರ್ಯದರ್ಶಿ, ಸರಕಾರದ ಸಲಹೆಗಾರ್ತಿ ಶೀಲಾ ಬಾಲಕೃಷ್ಣನ್ ಸಹಿತ ಮೂವರು ಉನ್ನತಾಧಿಕಾರಿಗಳಿಗೆ ರಾಜೀನಾಮೆ ನೀಡಲು ಸೂಚಿಸುವ ಮೂಲಕ ತಮಿಳುನಾಡು ರಾಜ್ಯದೆಲ್ಲೆಡೆ ಹೊಸ ಬದಲಾವಣೆಯ ಅಲೆ ಎದ್ದಿದೆ.

   ಶೀಲಾ ಬಾಲಕೃಷ್ಣನ್, ಕೆಎನ್ ವೆಂಕಟರಮಣನ್‌ರಿಗೆ ತಮ್ಮ ಹುದ್ದೆಯನ್ನು ತ್ಯಜಿಸುವಂತೆ ಸಿಎಂ ಓ. ಪನ್ನೀರ್ ಸೆಲ್ವಂ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಯ ಕಾರ್ಯದರ್ಶಿಯಾಗಿರುವ ರಾಮಲಿಂಗಂ ಸೇವೆಯಲ್ಲಿರುವ ಅಧಿಕಾರಿಯಾಗಿದ್ದು, ಅವರಿಗೂ ಹುದ್ದೆ ತ್ಯಜಿಸಲು ಸೂಚಿಸಲಾಗಿದೆ ಎನ್ನಲಾಗಿದೆ.

2014ರಲ್ಲಿ ನಾಗರಿಕ ಸೇವೆಯಿಂದ ನಿವೃತ್ತಿಯಾದ ಬಳಿಕ ಮಾಜಿ ಮುಖ್ಯಮಂತ್ರಿ ಜಯಲಲಿತಾರಿಂದ ಸಲಹೆಗಾರ್ತಿಯಾಗಿ ನೇಮಕಗೊಂಡಿದ್ದ ಶೀಲಾ ಅವರು ಅವರು ಈಗಾಗಲೇ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ವೆಂಕಟರಾಮನ್ ರಾಜೀನಾಮೆಗಾಗಿ ಕಾಯಲಾಗುತ್ತಿದೆ. ಈ ಮೂವರು ಉನ್ನತಾಧಿಕಾರಿಗಳು ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾಗೆ ತುಂಬಾ ಆತ್ಮೀಯರಾಗಿದ್ದವರು. ಜಯಲಲಿತಾ ನಿಧನರಾದ ಎರಡು ತಿಂಗಳ ಬಳಿಕ ಸರಕಾರ ಈ ಹೆಜ್ಜೆ ಇಟ್ಟಿದೆ.

‘‘ಸಿಎಂ(ಪನ್ನೀರ್‌ಸೆಲ್ವಂ) ಪೊಯೆಸ್ ಗಾರ್ಡನ್‌ನಿಂದ(ಶಶಿಕಲಾ) ಬರುವ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ. ಇದೊಂದು ಅತ್ಯಂತ ಆಘಾತಕಾರಿ ಹೆಜ್ಜೆ’’ ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ.

 ಜಯಲಲಿತಾ 75 ದಿನಗಳ ಕಾಲ ಅಪೊಲೊ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಶೀಲಾ ಅವರು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಮುಖ್ಯಮಂತ್ರಿ ಜಯಲಲಿತಾರ ನಡುವೆ ಕೇಂದ್ರ ವ್ಯಕ್ತಿಯಾಗಿ ಗುರುತಿಸಿಕೊಂಡು ತಮಿಳುನಾಡಿನ ಆಡಳಿತವನ್ನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಮುನ್ನಡೆಸಿದ್ದರು.

ಕೇರಳ ಮೂಲದ 1976ರ ಐಎಎಸ್ ಬ್ಯಾಚಿನ ಶೀಲಾ ಬಾಲಕೃಷ್ಣನ್ 1977ರಲ್ಲಿ ತಮಿಳುನಾಡಿನ ತಂಜಾವೂರಿನಲ್ಲಿ ಸಹಾಯಕ ಕಲೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. 2002 ರಿಂದ 2006ರ ತನಕ ರಾಜ್ಯ ಕಾರ್ಯದರ್ಶಿಯಾಗಿ ಆಗಿನ ಮುಖ್ಯಮಂತ್ರಿ ಜಯಲಲಿತಾರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಶೀಲಾ 2013ರ ಜ.1ರಂದು ಮುಖ್ಯ ಕಾರ್ಯದರ್ಶಿಯಾಗಿ ಭಡ್ತಿ ಪಡೆದಿದ್ದರು. 2014ರ ಮಾ.14ರ ತನಕ ಇದೇ ಹುದ್ದೆಯಲ್ಲಿ ಮುಂದುವರಿದಿದ್ದರು.

ಜಯಲಲಿತಾರ ‘ಕಣ್ಣು ಹಾಗೂ ಕಿವಿ’’ಯಾಗಿದ್ದ ಶೀಲಾ ನಿವೃತ್ತಿಯ ಬಳಿಕ ಒಂದು ವರ್ಷಗಳ ಕಾಲ ಸರಕಾರದ ಸಲಹೆಗಾರ್ತಿಯಾಗಿದ್ದರು. 2015ರಲ್ಲಿ ಅವರ ಸೇವೆಯನ್ನು ಎರಡು ವರ್ಷಕ್ಕೆ ವಿಸ್ತರಿಸಲಾಗಿತ್ತು. ವೆಂಕಟರಮಣನ್ 1987ರ ಕೆಎಎಸ್ ಅಧಿಕಾರಿಯಾಗಿದ್ದು 2012ರಲ್ಲಿ ಪ್ರಿನ್ಸಿಪಾಲ್ ಸೆಕ್ರಟರಿಯಾಗಿ ನಿವೃತ್ತಿಯಾಗಿದ್ದರು.ಈ ವರ್ಷದ ಮೇನಲ್ಲಿ ಅವರ ಐದು ವರ್ಷಗಳ ಅವಧಿ ಮುಕ್ತಾಯವಾಗಬೇಕಾಗಿತ್ತು.

  ಕಳೆದ ವರ್ಷ ಡಿ.5 ರಂದು ಜಯಲಲಿತಾ ನಿಧನರಾದ ಬಳಿಕ ಎಐಎಡಿಎಂಕೆ ನಾಯಕಿ ಜಯಲಲಿತಾ ನೇಮಕ ಮಾಡಿರುವ ಅಧಿಕಾರಿಗಳನ್ನು ಕಿತ್ತ್ತುಹಾಕಿ ಹೊಸಬರನ್ನು ನೇಮಕಮಾಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಅದು ನಿಜವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News