ಉತ್ತರ ಪ್ರದೇಶದಲ್ಲಿ ಹಿಂದುತ್ವ ಕಾರ್ಯಕರ್ತರಿಂದ ಬಿಜೆಪಿಗಾಗಿ 'ಟ್ರಂಪ್ ಸೇನಾ'
ಲಕ್ನೋ, ಫೆ.5: ಬಿಜೆಪಿ ಬೆಂಬಲಿಸುವ ಸಲುವಾಗಿ ಮತ್ತು ಪಶ್ಚಿಮ ಉತ್ತರ ಪ್ರದೇಶದಿಂದ ಹಿಂದೂ ವಲಸೆಯನ್ನು ತಡೆಗಟ್ಟುವ ಸಲುವಾಗಿ 'ಟ್ರಂಪ್ ಸೇನಾ' ಎಂಬ ಹಿಂದುತ್ವವಾದಿ ಕಾರ್ಯಕರ್ತರ ಪಡೆ ರಚನೆಯಾಗಿದೆ. ಇದು ಮುಸ್ಲಿಂ ಬಾಹುಳ್ಯದ ದೇಶಗಳಿಂದ ಅಮೆರಿಕಕ್ಕೆ ವಲಸೆ ಬರುವುದನ್ನು ತಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಸ್ಫೂರ್ತಿ ಪಡೆದಿದೆ.
ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಹಾಪುರದ ಪಿಕುವಾ ಎಂಬಲ್ಲಿ ನಡೆಸಿದ ಚುನಾವಣಾ ರ್ಯಾಲಿಯನ್ನು ಮೊದಲ ಬಾರಿಗೆ ಈ ಸೇನೆ ಬೆಂಬಲಿಸಿತು. ಹಾಪುರ ಜಿಲ್ಲೆಯ ದೌಲಾನಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ರ್ಯಾಲಿ ನಡೆಯಿತು. ಬಿಜೆಪಿಯಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಡಾ.ರಮೇಶ್‌ಚಂದ್ರ ಥೋಮರ್ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
"ಪಶ್ಚಿಮ ಉತ್ತರ ಪ್ರದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯುವ ಸಲುವಾಗಿ ಈ ಸೇನಾ ರಚನೆಯಾಗಿದೆ. ಹಿಂದೂಗಳು ತಮ್ಮ ಆಸ್ತಿಪಾಸ್ತಿಗಳನ್ನು ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ಇದೆ. ತಮ್ಮ ಕಾರ್ಯದ ಮೂಲಕ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾವು ಪ್ರೇರಿತರಾಗಿದ್ದೇವೆ. ಹಿಂದೂಗಳ ವಲಸೆ ತಡೆಗೆ ಆಗ್ರಹಿಸಿರುವ ಯೋಗಿ ಆದಿತ್ಯನಾಥ್ ಅವರನ್ನೂ ನಾವು ಬೆಂಬಲಿಸುತ್ತಿದ್ದೇವೆ. ಥೋಮರ್ ಅವರ ಕಳಕಳಿಯನ್ನು ನಾವು ಬೆಂಬಲಿಸುತ್ತೇವೆ. ದೌರ್ಜನ್ಯವನ್ನು ತಡೆಯುವುದೇ ನಮ್ಮ ಉದ್ದೇಶ" ಎಂದು ಸೇನಾ ಮೂಲಗಳು ಹೇಳಿವೆ.
ಟ್ರಂಪ್ ಸೇನಾ ಕಾರ್ಯಕರ್ತರು ಇಡೀ ಕ್ಷೇತ್ರದಲ್ಲಿ ಸಂಚರಿಸಿ ಹಿಂದೂಗಳಿಗೆ ಅಭಯ ನೀಡುತ್ತಿದ್ದು, ಹಿಂದೂಗಳಿಗೆ ಯಾವುದೇ ತೊಂದರೆಗಳಾದಲ್ಲಿ ತಕ್ಷಣ ಸಂಪರ್ಕಿಸಬಹುದಾಗಿದೆ. ಸೇನಾ ಅವರಿಗೆ ಸೂಕ್ತ ರಕ್ಷಣೆ ನೀಡುತ್ತದೆ ಎಂದು ಮುಖಂಡರು ಹೇಳಿದ್ದಾರೆ.