ಅಸೆಂಬ್ಲಿ ಭಾಷಣವನ್ನು ಫೇಸ್‌ಬುಕ್ ಲೈವ್ ನೀಡಿದ ಅಸ್ಸಾಂ ಶಾಸಕ
ಗುವಾಹತಿ, ಫೆ.5: ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷದ ಸದಸ್ಯರೊಬ್ಬರು ತಾವು ವಿಧಾನಸಭೆಯಲ್ಲಿ ಮಾಡಿದ ಭಾಷಣವನ್ನು ಕಾನೂನುಬಾಹಿರವಾಗಿ ಫೇಸ್‌ಬುಕ್ ಲೈವ್ ಮೂಲಕ ನೇರ ಪ್ರಸಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬಾಂಗ್ಲಾದೇಶಿ ಅಕ್ರಮ ವಲಸೆ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಮಾಡಿದ ಭಾಷಣವನ್ನು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಶಾಸಕ ಅಮೀನುಲ್ ಇಸ್ಲಾಂ (ಧಿಂಗ್ ಕ್ಷೇತ್ರ) ಅವರು ಈ ಭಾಷಣದ ನೇರ ಪ್ರಸಾರ ಮಾಡಿದ್ದಾರೆ. ಹೆಚ್ಚು ಮಂದಿ ತಮ್ಮ ಭಾಷಣವನ್ನು ಕೇಳಿಸಿಕೊಂಡು ಅವರಲ್ಲಿ ಜಾಗೃತಿ ಮೂಡುವಂತಾಗಬೇಕು ಎಂಬ ಕಾರಣಕ್ಕಾಗಿ ನೇರಪ್ರಸಾರ ಮಾಡಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ.
"ಶಾಸನ ಸಭೆಯ ನಡಾವಳಿಯು ಸದನದ ಕಲಾಪವನ್ನು ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಬಾರದು ಎಂದು ಹೇಳುವುದಿಲ್ಲ. ಇದು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಸ್ಪೀಕರ್ ತಪ್ಪು ಎಂದು ಪರಿಗಣಿಸಿದರೆ, ಮುಂದೆ ಹಾಗೆ ಮಾಡುವುದಿಲ್ಲ" ಎಂದು ಅವರು ಹೇಳಿದ್ದಾರೆ.
"ಈ ಬಗ್ಗೆ ನೇರವಾಗಿ ತಕ್ಷಣ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮೌಖಿಕವಾಗಿ ಕೆಲ ಶಾಸಕರಿಂದ ದೂರು ಬಂದಿದೆ. ಲಿಖಿತವಾಗಿ ದೂರು ನೀಡುವಂತೆ ಕೇಳಿದ್ದೇನೆ. ಆ ಬಳಿಕ ನಿರ್ಧಾರ ಕೈಗೊಳ್ಳುತ್ತೇನೆ. ದೂರದರ್ಶನ ಕೂಡಾ ಅನುಮತಿ ಪಡೆದೇ ಪ್ರಸಾರ ಮಾಡುತ್ತದೆ" ಎಂದು ಸ್ಪೀಕರ್ ಹಿತೇಂದ್ರನಾಥ್ ಗೋಸ್ವಾಮಿ ಹೇಳಿದ್ದಾರೆ.
ಬಿಜೆಪಿಯ ಸಂಸದೀಯ ವ್ಯವಹಾರಗಳ ಸಚಿವ ಚಂದ್ರಮೋಹನ್ ಪಟೌರಿ, ಇಸ್ಲಾಂ ಅವರ ಈ ಕ್ರಮ ಅನೈತಿಕ. ವಿಧಾನಸಭೆಯ ಕಲಾಪ ವರದಿ ಮಾಡುವ ಮಾಧ್ಯಮದವರು ಕೂಡಾ ಇಂಥ ಅನೈತಿಕ ಕೆಲಸದಲ್ಲಿ ತೊಡಗುವುದಿಲ್ಲ. ಇಂಥ ನೇರ ಪ್ರಸಾರ ಖಂಡನೀಯ ಹಾಗೂ ಕೋಮು ಪ್ರಚೋದಕ ಎಂದು ಅಭಿಪ್ರಾಯಪಟ್ಟಿದ್ದಾರೆ.