×
Ad

ಮಹಾರಾಣ ಪ್ರತಾಪನ ಎದುರು ಅಕ್ಬರನ್ನು ಸೋಲಿಸಲು ಹೊರಟ ಬಿಜೆಪಿ ಶಾಸಕ !

Update: 2017-02-05 09:26 IST

ಮಹಾರಾಣ ಪ್ರತಾಪನ ಎದುರು ಅಕ್ಬರನನ್ನು ಸೋಲಿಸಲು ಹೊರಟ ಬಿಜೆಪಿ ಶಾಸಕ!
ಜೈಪುರ, ಫೆ.5: ರಾಜಸ್ಥಾನ ವಿಶ್ವವಿದ್ಯಾನಿಲಯ ಇತಿಹಾಸದ ಮರುಸೃಷ್ಟಿಗೆ ಹೊರಟಿದೆ. ಜೈಪುರದ ಕೃಷ್ಣಪೋಲ್ ಕ್ಷೇತ್ರದ ಬಿಜೆಪಿ ಶಾಸಕ ಮೋಹನಲಾಲ್ ಗುಪ್ತಾ ಅವರು ಐತಿಹಾಸಿಕ ಹಲ್ದಿಘಾಟಿ ಯುದ್ಧದ ಘಟನಾವಳಿಯನ್ನೇ ತಿರುಚುವ ಪ್ರಸ್ತಾಪ ಮುಂದಿಟ್ಟಿದ್ದಾರೆ. 1576ರ ಈ ಯುದ್ಧದಲ್ಲಿ ವಾಸ್ತವವಾಗಿ ಅಕ್ಬರ್ ಜಯಿಸಿದ್ದನ್ನು ಅಲ್ಲಗಳೆದು, ಮಹಾರಾಣಾ ಪ್ರತಾಪನೇ ಈ ಯುದ್ಧದಲ್ಲಿ ಜಯ ಗಳಿಸಿದ್ದಾಗಿ ದಾಖಲಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ರಾಜಸ್ಥಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿರುವ ಗುಪ್ತಾ, ಶನಿವಾರ, ಸಿಂಡಿಕೇಟ್ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನಾಲ್ಕು ಅಧ್ಯಾಯಗಳನ್ನು ಹೆಚ್ಚಾಗಿ ಸೇರಿಸುವ ಪ್ರಸ್ತಾವವನ್ನೂ ಅವರು ಮುಂದಿಟ್ಟಿದ್ದಾರೆ. ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ರಾಷ್ಟ್ರೀಯವಾದ ಕೂಡಾ ಇದರಲ್ಲಿ ಸೇರಿದೆ.

"ತಿರುಚಿದ ಇತಿಹಾಸವನ್ನು ನಮ್ಮ ಮಕ್ಕಳಿಗೆ ಪಠ್ಯದಲ್ಲಿ ಬೋಧಿಸಲಾಗುತ್ತಿದೆ. ಇಂಥ ತಪ್ಪುಗಳನ್ನು ಸರಿಪಡಿಸಿ, ನೈಜ ಇತಿಹಾಸವನ್ನು ಮಕ್ಕಳಿಗೆ ಬೋಧಿಸಲು ಇದು ಸಕಾಲ" ಎಂದು ಗುಪ್ತಾ ತಮ್ಮ ನಿರ್ದಾರವನ್ನು ಸಮರ್ಥಿಸಿಕೊಂಡಿದ್ದಾರೆ. ರಾಜಸ್ಥಾನ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರೇ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಮಹಾರಾಣ ಪ್ರತಾಪ ಹಾಗೂ ಅಕ್ಬರ್ ನಡುವಿನ ಯುದ್ಧದ ಘಟನೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರಸ್ತಾವವನ್ನು ಪರಿಗಣಿಸಲು ಕುಲಪತಿ ರಾಜೇಶ್ವರ ಸಿಂಗ್ ಅವರು ಇತಿಹಾಸ ಅಧ್ಯಯನ ಮಂಡಳಿಗೆ ಸೂಚಿಸಿದ್ದಾರೆ. ಅಧ್ಯಯನ ಮಂಡಳಿಯ ಅನುಮೋದನೆ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News