ಬ್ಯಾಂಕ್ ನ ಜಪ್ತಿ ಅವಾಂತರ: ಮೂರುದಿನ ಬೀದಿಪಾಲಾದ ಕುಟುಂಬ
ಕೊಚ್ಚಿ,ಫೆ.6: ನೋಟಿಸ್‌ನಲ್ಲಿ ಸೂಚಿಸದ ಸ್ಥಳ ಜಪ್ತಿ ಮಾಡಿದ ಬ್ಯಾಂಕ್‌ವೊಂದರ ಕ್ರಮದಿಂದಾಗಿ ತಮ್ಮ ಪುಟ್ಟಮಕ್ಕಳ ಸಹಿತ ಒಂದು ಕುಟುಂಬ ಮೂರುದಿವಸ ಬೀದಿಪಾಲಾದ ಘಟನೆ ನಡೆದಿದೆ. ಎಳಂಕುಳಂ ಚಿವನ್ನೂರ್ ತಿರುನಿಲತ್ ರೋಬಿ, ಪತ್ನಿ ಹಾಗೂ ಮೂವರು ಸಣ್ಣ ವಕ್ಕಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೀದಿಪಾಲಾಗಿದ್ದರು. ಜಪ್ತಿ ನೋಟಿಸ್ ಅಂಟಿಸಿದ ಕೂಡಲೇ ಮನೆಯವರನ್ನು ಹೊರಗೆ ಹಾಕಿ ಮನೆಗೆ ಬೀಗಹಾಕಿ ಸೀಲು ಹಾಕಲಾಗಿತ್ತು. ಬೇರೆ ಮನೆಗೆ ಜಪ್ತಿ ಆದೇಶವಿದೆ ಇದಲ್ಲ ಎಂದು ಹೇಳಿದರೂ ಕಿವಿಗೊಡದ ಮನೆಮಂದಿಯನ್ನು ಹೊರಗಟ್ಟಿ ಅಧಿಕಾರಿಗಳು ಬೀಗ ಜಡಿದಿದ್ದರು. ನಂತರ ಡಿವಿಷನ್ ಕೌನ್ಸಿಲರ್ ಸಹಿತ ಸಾಮಾಜಿಕ ಕಾರ್ಯಕರ್ತರು ಮಧ್ಯಪ್ರವೇಶಿಸಿದ ಬಳಿಕ ನಾಲ್ಕನೆ ದಿವಸ ಬೀಗ ಜಡಿದ ಅದೇ ಅಧಿಕಾರಿ ಬೀಗತೆಗೆದು ಕೊಟ್ಟಿದ್ದಾರೆ. ಅಷ್ಟು ದಿವಸವೂ ಈ ಕುಟುಂಬ ಮಕ್ಕಳೊಂದಿಗೆ ಮನೆಯ ಹೊರಗೆ ದಿನದೂಡಬೇಕಾಯಿತು. ಸ್ವಂತ ಹೆಸರಿನಲ್ಲಿ ರೋಬಿಗೆ ಜಮೀನಿಲ್ಲ. ತಂದೆಯ ಹೆಸರಿನಲ್ಲಿರುವ ಮನೆಯಲ್ಲಿ ಅವರು ಪತ್ನಿಮಕ್ಕಳೊಂದಿಗೆ ವಾಸವಿದ್ದಾರೆ. ತಂದೆ ಮ್ಯಾನುವೆಲ್ ಮತ್ತು ಹಿರಿಯ ಸಹೋದರ ರೋಯಿಯ ಹೆಸರಿನಲ್ಲಿ ಸೆಂಟ್ರಲ್ ಬ್ಯಾಂಕ್‌ನಿಂದ ಸಾಲಪಡೆದಿದ್ದು, ಅದನ್ನು ಮರಳಿ ಸಂದಾಯಮಾಡಿಲ್ಲ ಎನ್ನುವ ಕಾರಣವೊಡ್ಡಿ 2016ರಲ್ಲಿ ಮ್ಯಾನುವೆಲ್ ಮತ್ತು ರೋಯಿಗೂ ಬ್ಯಾಂಕ್ ಡಿಮಾಂಡ್ ನೋಟಿಸ್ ಕಳುಹಿಸಿತ್ತು. ಆದರೆ ನೋಟಿಸ್‌ನ ಬೇಡಿಕೆ ಈಡೇರಿಸಿಲ್ಲ ಎಂದು ಬ್ಯಾಂಕ್ ಜನವರಿ 31ಕ್ಕೆ ಜಮೀನನ್ನು ತನ್ನ ಹೆಸರಿಗೆ ಬರೆದು ಜಪ್ತಿ ನೋಟಿಸ್ ಹೊರಡಿಸಿತ್ತು. ಆದರೆ ಜಪ್ತಿಗೆ ಬೇರೆ ಸ್ಥಳವನ್ನು ನೋಟಿಸಿನಲ್ಲಿ ಸೂಚಿಸಲಾಗಿತ್ತು. ಮ್ಯಾನುವೆಲ್‌ರ ಮರಡ್ ಎಂಬಲ್ಲಿ ಇರುವ ಮೂರು ಸೆಂಟ್ಸ್ ಸ್ಥಳ ಜಪ್ತಿಗೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಸಂಬಂಧವಿಲ್ಲದ ಸ್ಥಳವನ್ನು ಜಪ್ತಿ ಮಾಡಲಾಗಿತ್ತು. ಜಪ್ತಿ ಅಧಿಕಾರಿಗೆ ಸ್ಥಳವನ್ನು ತೋರಿಸಿದ್ದು ರೋಬಿಯ ಹಿರಿಯಣ್ನ ರೋಯಿ ಆಗಿದ್ದನೆಂದು ರೋಬಿ ತಿಳಿಸಿದ್ದಾರೆ.
ಫೆಬ್ರವರಿ ಒಂದಕ್ಕೆ ಜಪ್ತಿ ನಡೆಸಲಾಗಿದ್ದು ರೋಬಿ, ಅವರ ಪತ್ನಿ ಜೆನ್ಸಿ ಮತ್ತು ದಂಪತಿಯ ತ್ರಿವಳಿ ಮಕ್ಕಳಾದ ಮರಿಯ, ಅಲ್ಫಿಯಾ, ಯೋಹಾನ್ನನ್‌ರನ್ನು ಮನೆಯಿಂದ ಹೊರದೂಡಲಾಗಿತ್ತು. ಮನೆಯ ಹೊರಗೆ ಮಕ್ಕಳು ಮತ್ತು ದಂಪತಿಗಳು ಚಾಪೆ ಹಾಸಿ ದಿನದೂಡುತ್ತಿರುವುದನ್ನು ನೋಡಿದ ಸಾಮಾಜಿಕ ಕಾರ್ಯಕರ್ತರು ಸಮಸ್ಯೆಯನ್ನು ಬಗೆಹರಿಸಲು ನೆರವಾಗಿದ್ದಾರೆಂದು ವರದಿ ತಿಳಿಸಿದೆ.