ಚಿನ್ನಮ್ಮಗೆ ಸಿಎಂ ಪಟ್ಟ ಅಭದ್ರ !
ಚೆನ್ನೈ, ಫೆ.6: ತಮಿಳುನಾಡಿನ ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ನಟರಾಜನ್ ಮಂಗಳವಾರ ನೂತನ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ, ಆಕೆಯ ಸಿಎಂ ಪಟ್ಟ ಅಲುಗಾಡುತ್ತಿದೆ.
ಶಶಿಕಲಾ ನಟರಾಜನ್ ಸಿಎಂ ಪಟ್ಟ ಏರುವುದಕ್ಕೆ ತಯಾರಿ ನಡೆಸುತ್ತಿದ್ದಂತೆ ಅವರಿಗೆ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆಯ ಆರೋಪದ ಕಡತದ ತೆರೆದುಕೊಂಡ ಹಿನ್ನೆಲೆಯಲ್ಲಿ ಸಿಎಂ ಪಟ್ಟ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಆದಾಯಕ್ಕಿಂತ ಆಸ್ತಿ ಗಳಿಕೆಯ ಆರೋಪದಲ್ಲಿ ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಅವರು ಮೊದಲ ಆರೋಪಿಯಾಗಿದ್ದರೆ. ಅವರ ಸ್ನೇಹಿತೆ ಶಶಿಕಲಾ ಎರಡನೆ ಆರೋಪಿಯಾಗಿದ್ದಾರೆ. ಜಯಲಲಿತಾ ಮತ್ತು ಶಶಿಕಲಾ ಅವರಿಗೆ ಕರ್ನಾಟಕ ಹೈಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಆದರೆ ಕರ್ನಾಟಕ ಸರಕಾರ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕಳೆದ ಎಂಟು ತಿಂಗಳಿನಿಂದ ಕಾಯ್ದಿರಿಸಿರುವ ತೀರ್ಪು ಮುಂದಿನ ವಾರ ಪ್ರಕಟಗೊಳ್ಳಲಿದೆ.
ಒಂದು ವೇಳೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಎತ್ತಿ ಹಿಡಿದರೆ ಚಿನ್ನಮ್ಮ ಅವರಿಗೆ ಮುಖ್ಯ ಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲು ಅಡ್ಡಿ ಇಲ್ಲ. ಆದರೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದರೆ, ವಿಶೇಷ ಕೋರ್ಟ್‌ನ ತೀರ್ಪನ್ನು ಎತ್ತಿ ಹಿಡಿದರೆ ಶಶಿಕಲಾ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪ್ರಕರಣ ಹೈಕೋರ್ಟ್‌ಗೆ ಮರಳಿಸಿದರೂ ತೊಂದರೆ ಪಕ್ಕಾ ಎನ್ನಲಾಗಿದೆ.
ಸುಪ್ರೀಂ ತೀರ್ಪು ಚಿನ್ನಮ್ಮ ಪಾಲಿಗೆ ನಿರ್ಣಾಯಕವಾಗಿದೆ.