ಸಮುದ್ರಕ್ಕೆ ತೈಲ ಸೋರಿಕೆ ಘಟನೆಗೆ ಮಾನವ ತಪ್ಪು ಕಾರಣ: ಜಯಕುಮಾರ್
ಚೆನ್ನೈ, ಫೆ.6: ಚೆನ್ನೈ ಕಡಲತೀರದ ಬಳಿ ಇತ್ತೀಚೆಗೆ ಎರಡು ಹಡಗುಗಳು ಡಿಕ್ಕಿಯಾಗಿ ತೈಲ ಸೋರಿಕೆಯಾದ ಘಟನೆಗೆ ಮಾನವ ತಪ್ಪು ಕಾರಣ ಎಂದು ರಾಜ್ಯದ ಮೀನುಗಾರಿಕಾ ಸಚಿವ ಡಿ.ಜಯಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಸಮುದ್ರದ ನೀರಿನಲ್ಲಿರುವ ತೈಲದ ಅಂಶವನ್ನು ತೊಡೆದುಹಾಕಲು ಸರಕಾರ ಸರ್ವ ಪ್ರಯತ್ನಗಳನ್ನೂ ನಡೆಸುತ್ತಿದೆ ಎಂದ ಅವರು, ಹಾನಿಗೊಂಡ ಹಡಗಿನಿಂದ ತೈಲ ಸೋರಿಕೆಯನ್ನು ತಡೆಗಟ್ಟಲಾಗಿದೆ . ಈಗ ಎರಡೂ ಹಡಗುಗಳು ಕಾಮರಾಜಾರ್ (ಈ ಹಿಂದಿನ ಎಣ್ಣೋರ್ ಬಂದರು) ಬಂದರು ಆಡಳಿತ ಮಂಡಳಿಯ ಸುಪರ್ದಿಯಲ್ಲಿವೆ ಎಂದಿದ್ದಾರೆ.
ಕಾಮರಾಜಾರ್ ಬಂದರು ಬಳಿ ತೈಲ ತುಂಬಿದ್ದ ಡಾನ್ ಕಂಚೀಪುರಂ ಹಾಗೂ ಬಿ.ಡಬ್ಲೂ.ಮಾಪ್ಳೆ ಹಡಗಿನ ಮಧ್ಯೆ ಜನವರಿ 28ರಂದು ಪೂರ್ವಾಹ್ನ 4 ಗಂಟೆ ವೇಳೆ ಡಿಕ್ಕಿ ಸಂಭವಿಸಿ ತೈಲ ಸೋರಿಕೆಯಾಗಿತ್ತು.
ಈ ಪ್ರದೇಶದಲ್ಲಿ ಮೀನುಗಾರರು ಹಿಡಿದಿರುವ ಮೀನುಗಳು ತಿನ್ನಲು ಯೋಗ್ಯವಾಗಿವೆ. ಯಾಕೆಂದರೆ ಈ ಅಪಘಾತ ಸಂಭವಿಸಿದ್ದು ಕಡಲ ತೀರದ ಬಳಿಯಲ್ಲಿ. ಆದರೆ ಮೀನುಗಾರರು ಕಡಲಿನ ಮಧ್ಯಭಾಗಕ್ಕೆ ತೆರಳಿ ಮೀನು ಹಿಡಿಯುತ್ತಾರೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತೈಲ ಸೋರಿಕೆಯಾಗಿರುವ ಕಾರಣ ಈ ಪ್ರದೇಶದ ಮೀನುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ಸರಕಾರದ ಗಮನಕ್ಕೆ ಬಂದಿವೆ. ಹೀಗೆ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.