ಉತ್ತರಾಖಂಡ: ಬಿಜೆಪಿಯಿಂದ ಮತ್ತೆ 33 ಮಂದಿ ಉಚ್ಛಾಟನೆ
ಡೆಹ್ರಾಡೂನ್, ಫೆ.6: ಉತ್ತರಾಖಂಡದಲ್ಲಿ ಫೆ.15ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕಾರಣಕ್ಕೆ ಮತ್ತೂ 33 ಮಂದಿಯನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ. ಇವರಲ್ಲಿ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರೆ, ಇನ್ನು ಕೆಲವರು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪವಿದೆ.
ನಾಮಪತ್ರ ಹಿಂಪಡೆಯುವ ಅಂತಿಮ ದಿನವಾದ ಫೆ.1ರ ಬಳಿಕವೂ ಕಣದಲ್ಲಿ ಉಳಿದಿದ್ದ 18 ಮಂದಿಯನ್ನು ಅಂದೇ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇದೀಗ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಮತ್ತೂ 33 ಮಂದಿಯನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಸ್ಥಳೀಯ ಘಟಕದ ಅಧ್ಯಕ್ಷ ಅಜಯ್ ಭಟ್, ಪ್ರಧಾನ ಕಾರ್ಯದರ್ಶಿ ನರೇಶ್ ಬನ್ಸಾಲ್ ತಿಳಿಸಿದ್ದಾರೆ.
ಕಾಂಗ್ರೆಸ್ ತೊರೆದು ಪಕ್ಷಕ್ಕೆ ಸೇರ್ಪಡೆಯಾದವರೆಲ್ಲರಿಗೂ ಸ್ಪರ್ಧಿಸಲು ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಿಜೆಪಿಯ ಅತೃಪ್ತರು ಬಂಡಾಯ ಸ್ಪರ್ಧೆಗೆ ಇಳಿದಿದ್ದರು. ಟಿಕೆಟ್ ಹಂಚಿಕೆ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಜಯ್ ಭಟ್, ಉಚ್ಛಾಟಿತರಾದವರು ‘ಮಿತಿಮೀರಿದ ಮಹತ್ವಾಕಾಂಕ್ಷಿಗಳು’ ಎಂದು ಬಣ್ಣಿಸಿದರಲ್ಲದೆ, ಇವರು ಪಕ್ಷದಿಂದ ದೂರವಾದರೂ ಪಕ್ಷಕ್ಕೆ ಏನೂ ತೊಂದರೆಯಾಗದು. ರಾಜ್ಯ ಚುನಾವಣೆಯಲ್ಲಿ ‘ಮೋದಿ ಅಲೆ’ಯ ಕಾರಣ ಬಿಜೆಪಿ ಬಹುಮತ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.