×
Ad

ನಿರ್ಲಕ್ಷಕ್ಕೆ ಸಿಬ್ಬಂದಿಯೇ ಬಲಿ: ದಿಲ್ಲಿ ಏಮ್ಸ್‌ನ ಐದು ವೈದ್ಯರ ಅಮಾನತು

Update: 2017-02-06 23:48 IST

ಹೊಸದಿಲ್ಲಿ, ಫೆ.6: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಸಿಬ್ಬಂದಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮೂವರು ಹಿರಿಯ ವೈದ್ಯರು ಹಾಗೂ ಇಬ್ಬರು ಕಿರಿಯ ವೈದ್ಯರು ಸೇರಿದಂತೆ 5 ಮಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಏಮ್ಸ್‌ನ ಮಹಿಳಾ ಸಿಬ್ಬಂದಿಯೊಬ್ಬರು ಹೆರಿಗೆ ಬಳಿಕ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆಪಾದಿಸಿ ನರ್ಸ್ ಸಂಘದವರು ದಿಢೀರ್ ಪ್ರತಿಭಟನೆಗೆ ಇಳಿದರು. ರಾಜಬೀರ್ ಕೌರ್ (28) ಎಂಬ ಮಹಿಳೆ ಏಮ್ಸ್‌ನ ವೈದ್ಯಕೀಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆರಿಗೆ ಸಂಕೀರ್ಣತೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಮೂರು ವಾರಗಳಿಂದ ಜೀವಬೆಂಬಲ ವ್ಯವಸ್ಥೆಯಲ್ಲಿ ಇಡಲಾಗಿತ್ತು. ರವಿವಾರ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. ಜನವರಿ 16ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರ ಹೃದಯ ಬಡಿತ ಅಸಹಜವಾಗಿದ್ದು, ಭ್ರೂಣದ ಬೆಳವಣಿಗೆ ಕೂಡಾ ನಿಧಾನವಾಗಿದೆ. ಇದು ಹುಟ್ಟಲಿರುವ ಜೀವಕ್ಕೆ ಅಪಾಯ ಎಂದು ವೈದ್ಯರು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ತುರ್ತಾಗಿ ಸಿಸೇರಿಯನ್ ನಡೆಸಿ ಹೆರಿಗೆ ಮಾಡಿಸಲು ವೈದ್ಯರು ನಿರ್ಧರಿಸಿದ್ದರು.
ಮಗು ಹುಟ್ಟುವ ಮೊದಲೇ ಮೃತಪಟ್ಟರೆ, ಕೌರ್ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಸಿಪಿಆರ್ ಚಿಕಿತ್ಸೆ ನೀಡಿದರೂ, ಹೃದಯ ಕಾರ್ಯಚಟುವಟಿಕೆ ಸಹಜ ಸ್ಥಿತಿಗೆ ತರಲು ಸಾಧ್ಯವಾಗಿರಲಿಲ್ಲ. ಬಳಿಕ ಕೌರ್ ಅರೆಪ್ರಜ್ಞಾವಸ್ಥೆಗೆ ಹೊರಳಿದ್ದರು ಎಂದು ನರ್ಸಿಂಗ್ ಸಿಬ್ಬಂದಿ ಸಂಘದ ಅಧ್ಯಕ್ಷ ಕುಮರ್ ಕಜ್ಲಾ ದೂರಿದ್ದಾರೆ.
ನರ್ಸಿಂಗ್ ಸಿಬ್ಬಂದಿ ಸಂಘದವರು ದಿಢೀರ್ ಪ್ರತಿಭಟನೆ ನಡೆಸಿ ವೈದ್ಯರ ಅಮಾನತಿಗೆ ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News