ಮೋದಿ ಶಕ್ತಿ ಕೇಂದ್ರದ ಮೇಲೆ ಆಮ್ ಆದ್ಮಿ ಕಣ್ಣು
ಹೊಸದಿಲ್ಲಿ, ಫೆ.6: ಪಂಜಾಬ್ ಹಾಗೂ ಗೋವಾ ವಿಧಾನಸಭಾ ಚುನಾವಣೆಯ ಬಳಿಕ ಇದೀಗ ಆಮ್ ಆದ್ಮಿ ಪಕ್ಷವು ಮೋದಿಯವರ ಶಕ್ತಿ ಕೇಂದ್ರವಾದ ಗುಜರಾತ್ ಮೇಲೆ ಕಣ್ಣಿಟ್ಟಿದೆ. ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗುಜರಾತಿನ ಎಲ್ಲಾ 182 ಕ್ಷೇತ್ರಗಳನ್ನು ಗುರಿಯಾಗಿಸಿ ಎಎಪಿ ಎರಡು ತಿಂಗಳುಪೂರ್ತಿ ನಡೆಯುವ ‘ಗುಜರಾತ್ ಆಝಾದಿ ಆಂದೋಲನ್’ ಆರಂಭಿಸಿದೆ. ತಮ್ಮ ಅಧಿಕ ರಕ್ತದೊತ್ತಡ ಸಮಸ್ಯೆಗೆ ದಿನಕ್ಕೆ ಮೂರು ಬಾರಿ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವ ಹೊರತಾಗಿಯೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ಚುನಾವಣೆಗಾಗಿ ಪಕ್ಷ ನಡೆಸುತ್ತಿರುವ ತಯಾರಿಯ ಪೂರ್ವಾಲೋಕನವನ್ನು ಸುಮಾರು ಮೂರು ಗಂಟೆಯುದ್ದಕ್ಕೂ ನಡೆದ ಸಭೆಯಲ್ಲಿ ಭಾಗವಹಿಸಿ ಅವಲೋಕಿಸಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಗುರಿಯಾಗಿಸಿ ಈ ಆಂದೋಲನ ನಡೆಸ ಲಾಗುತ್ತಿದ್ದು, ಪಕ್ಷದ ಗುಜರಾತ್ ವ್ಯವಹಾರಗಳ ಉಸ್ತುವಾರಿಯೂ ಆಗಿರುವ ದಿಲ್ಲಿಯ ಶಾಸಕ ಗುಲಾಬ್ ಸಿಂಗ್ ಯಾದವ್ ಅವರು ಹೇಳುವಂತೆ ಗುಜರಾತ್ ರಾಜ್ಯದ ಈಗಿನ ಸರಕಾರದಿಂದ ನಡೆಯುತ್ತಿರುವ ಭ್ರಷ್ಟಾಚಾರ, ಅನ್ಯಾಯ ಹಾಗೂ ಶೋಷಣೆಯಿಂದ ರಾಜ್ಯಕ್ಕೆ ಮುಕ್ತಿ ನೀಡುವ ಉದ್ದೇಶ ಎಎಪಿಗಿದೆ. ಅವರ ಪ್ರಕಾರ ಗುಜರಾತ್ ರಾಜ್ಯದಲ್ಲಿ ರಾಜಕೀಯದಿಂದ ಹಿಡಿದು ವ್ಯಾಪಾರ ವಹಿವಾಟುಗಳೆಲ್ಲವೂ ಅಮಿತ್ ಶಾ ಆಣತಿಯಂತೆಯೇ ನಡೆಯುತ್ತಿದ್ದು ಆಪ್ ಇದಕ್ಕೆ ಅಂತ್ಯ ಹಾಡಲು ಬಯಸಿದೆ.
ಆಪ್‌ನ ಆಂದೋಲನ ಮಾರ್ಚ್ 26ರ ತನಕ ನಡೆಯುವುದು. ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಈಗಾಗಲೇ ಎರಡು ಬಾರಿ ಗುಜರಾತ್ ಪ್ರವಾಸಗೈದಿದ್ದು ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಆಪ್ ಕಾರ್ಯಕರ್ತರು ಗುಜರಾತ್ ಸರಕಾರದ ವಿರುದ್ಧ ಪ್ರದರ್ಶನ ನಡೆಸುತ್ತಾ ಬಂದಿದ್ದಾರೆ. ಆದರೆ ರಾಜ್ಯದ ಆಪ್ ವಕ್ತಾರ ಹಾಗೂ ಪಕ್ಷ ನಾಯಕ ಹರ್ಷಿಲ್ ನಾಯಕ್ ಹೇಳುವಂತೆ ಪಕ್ಷ ಪೂರ್ಣಪ್ರಮಾಣದಲ್ಲಿ ಪ್ರಚಾರ ಕಾರ್ಯ ಕೈಗೊಂಡಿರುವುದು ಇದೇ ಮೊದಲ ಬಾರಿಯಾಗಿದೆ.