ಉ.ಪ್ರದೇಶ:ಶಾಲೆಯಲ್ಲಿ ಬಾಲಕಿಯರನ್ನು ಅರೆನಗ್ನಗೊಳಸಿ ಪರೇಡ್ ಮಾಡಿಸಿದ ಶಿಕ್ಷಕಿ
ಸೋನಭದ್ರಾ,ಫೆ.7: ಕೆಲವು ವಿದ್ಯಾರ್ಥಿನಿಯರನ್ನು ಅರೆನಗ್ನಗೊಳಿಸಿ ಶಾಲೆಯ ಆವರಣದಲ್ಲಿ ಅವರ ಪರೇಡ್ ಮಾಡಿಸಿದ್ದ ಜಿಲ್ಲೆಯ ಬಾಲಕಿಯರ ಪ್ರೌಢಶಾಲೆಯೊಂದರ ಮುಖ್ಯ ಶಿಕ್ಷಕಿಯನ್ನು ಸೋಮವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಹೋಮ್‌ವರ್ಕ್ ಮಾಡಿಕೊಂಡು ಬಂದಿಲ್ಲವೆಂಬ ಕಾರಣದಿಂದ ಎಂಟನೇ ತರಗತಿಯ ಕೆಲವು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಮುಖ್ಯಶಿಕ್ಷಕಿ ಮೀನಾ ಸಿಂಗ್ ಎರಡು ಗಂಟೆಗಳ ಕಾಲ ಶಾಲಾ ಆವರಣದಲ್ಲಿ ಅವರ ಪರೇಡ್ ಮಾಡಿಸಿದ್ದರು. ಶನಿವಾರ ನಡೆದಿದ್ದ ಈ ನಾಚಿಕೆಗೇಡಿನ ಕೃತ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಸಿಂಗ್ ಹೋಮ್‌ವರ್ಕ್ ಪೂರ್ಣಗೊಳಿಸದಿದ್ದರೆ ಅದನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆಯನ್ನೂ ಒಡ್ಡಿದ್ದರು.
ಸಂತ್ರಸ್ತ ಬಾಲಕಿಯರ ಹೆತ್ತವರು ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದರು. ಮೀನಾ ಸಿಂಗ್‌ರನ್ನು ತಕ್ಷಣವೇ ಅಮಾನತು ಗೊಳಿಸಿರುವ ಜಿಲ್ಲಾಧಿಕಾರಿ ಭೂಷಣ್‌ಸಿಂಗ್ ಅವರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.