ಜೈಲಿನಲ್ಲಿ ಗೋಮಾತಾಕೀ ಜೈ: ಡಿಐಜಿಗೆ ವರದಿ ಸಲ್ಲಿಕೆ
ಕಾಸರಗೋಡು,ಫೆ.7: ಚಿಮೆನಿ ಓಪನ್ ಜೈಲಿನಲ್ಲಿ ಗೋಮಾತಾಕೀ ಜೈ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದ ಪ್ರಾಥಮಿಕ ವರದಿಯನ್ನು ಜೈಲು ಡಿಐಜಿ ಶಿವದಾಸನ್ ತೈಪರಂಬಿಲ್ ಸಲ್ಲಿಸಿದ್ದಾರೆ. ಜೈಲು ಡಿಜಿಪಿ ಆರ್.ಶ್ರೀಲೇಖಾ ವರದಿ ಕೇಳಿದ ಹಿನ್ನೆಲೆಯಲ್ಲಿ ವರದಿಯನ್ನು ಅವರುಸಲ್ಲಿಸಿದ್ದು ತೆರೆದ ಜೈಲಿಗೆಕೊಡುಗೆಯಾಗಿ ಸಿಗುವ ಹಸುಗಳನ್ನು ಸ್ವೀಕರಿಸುವುದರಲ್ಲಿ ಜೈಲಿ ಸುಪರಿಡೆಂಟ್‌ರಿಂದ ತಪ್ಪುಗಳಾಗಿವೆಯೆ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಡಿಐಜಿ ಪತ್ರಿಕೆ ಯೊಂದಕ್ಕೆ ತಿಳಿಸಿದ್ದಾರೆ.
ಜನವರಿ ಒಂದರಂದು ಜೈಲಿನಲ್ಲಿ ಕರ್ನಾಟಕದ ಹೊಸದುರ್ಗ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತಿ ಸ್ವಾಮಿ 20 ಹಸುಗಳನ್ನು ಕೊಡುಗೆಯಾಗಿ ನೀಡಿದ್ದರು. ದೀಪ ಉರಿಸಿ ಕಾರ್ಯಕ್ರಮ ನಡೆಸಿ ಹಸುಗಳನ್ನು ಹಸ್ತಾಂತರಿಸಿದ್ದರು. ಹಸುಗಳ ಹಸ್ತಾಂತರದ ಸಮಯದಲ್ಲಿ ಗೋಮಾತಾಕೀ ಜೈ ಹಾಗೂ ರಾಘವೇಂದ್ರ ಭಾರತಿಕೀ ಜೈ ಎಂದು ಘೋಷಣೆ ಕೂಗಲಾಗಿತ್ತು.
ಸ್ವಾಮಿಯ ವಿರುದ್ಧ ತನಿಖೆ ನಡೆಸುವುದಿಲ್ಲ. ಸ್ವಾಮಿಯನ್ನು ಪ್ರಶ್ನಿಸುವುದಿಲ್ಲ. ತನಿಖೆಯ ವ್ಯಾಪ್ತಿಯಲ್ಲಿ ಸ್ವಾಮಿ ಮತ್ತು ಮಠ ಸೇರಿಲ್ಲ ಎಂದು ಡಿಐಜಿ ತಿಳಿಸಿದ್ದಾರೆ. ಘಟನೆಯ ತನಿಖೆ ನಡೆಸಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಕಳೆದ ದಿವಸ ಚಿಮೆನಿಯಲ್ಲಿ ಪ್ರತಿಭಟನೆ ನಡೆಸಿತ್ತು. ತನಿಖೆ ನಡೆಸಬೇಕೆಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿ.ಎಸ್. ಅಚ್ಯುತಾನಂದನ್ ಆಗ್ರಹಿಸಿದ್ದರೆಂದು ವರದಿ ತಿಳಿಸಿದೆ.