×
Ad

ಯುಎಪಿಎ ದುರುಪಯೋಗ ಬೇಡ, ಸಿಪಿಎಂಗರಿಗೆ ವಿಶೇಷ ವಿನಾಯಿತಿ ಬೇಡ: ಪಿಣರಾಯಿ ವಿಜಯನ್

Update: 2017-02-07 16:42 IST

ತಿರುವನಂತಪುರಂ,ಫೆ.7: ಯುಎಪಿಎ, ಕಾಪ್ಪ ಕಾನೂನುಗಳು ಯಾವ ಕಾರಣಕ್ಕೂ ದುರುಪಯೋಗಗೊಳ್ಳಬಾರದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅನಗತ್ಯವಾಗಿ ಕರಾಳ ಕಾನೂನುಗಳನ್ನು ಜನರ ಮೇಲೆ ಹೇರುವುದು ಸರಕಾರದ ನೀತಿಯಲ್ಲ. ಹಿಂದಿನ ಕಾಲದಲ್ಲಿಯೂ ಇಂತಹ ಕಾನೂನುಗಳ ವ್ಯಾಪಕ ದುರುಪಯೋಗ ನಡೆದಿದೆ. ಈ ಕೆಟ್ಟ ಹೆಸರನ್ನು ಪೊಲೀಸ್ ಪಡೆ ತಲೆ ಮೇಲೆ ಹೊತ್ತುಕೊಳ್ಳುವ ಸನ್ನಿವೇಶ ಹಲವು ಸಲ ಎದುರಾಯಿತು. ಇನ್ನು ಮುಂದೆ ಇಂತಹ ಕ್ರಮಗಳು ನಡೆಯಬಾರದೆಂದು ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೊ ಕಾನ್ಫೆರೆನ್ಸ್‌ನಲ್ಲಿ ಮುಖ್ಯಮಂತ್ರಿ ತಿಳಿಸಿದರು. ಜೊತೆಗೆ ರಾಜಕೀಯ ನಾಯಕರ ಸೂಚನೆಯಂತೆ ಪೊಲೀಸರು ಕೆಲಸ ಮಾಡಬಾರದೆಂದು ಅವರು ಎಚ್ಚರಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡಬಹುದು. ತೀರ್ಮಾನ ತೆಗೆದು ಕೊಳ್ಳಬಹುದು. ಇಂತಹ ಪೊಲೀಸಧಿಕಾರಿಗಳಿಗೆ ಸರಕಾರ ರಕ್ಷಣೆ ನೀಡುತ್ತದೆ. ಪೊಲೀಸ್ ಠಾಣೆಯಲ್ಲಿ ಸಮಾನ ನ್ಯಾಯ ಜಾರಿಗೆ ಬರಬೇಕು. ಮುಖ್ಯಮಂತ್ರಿಯ ಪಕ್ಷ ಎನ್ನುವ ವಿಶೇಷ ವಿನಾಯಿತಿಯನ್ನು ಯಾರಿಗೂ ನೀಡಬೇಕಿಲ್ಲ. ರಸ್ತೆತಡೆ ಒಡ್ಡುವವರ ಕಾಲು ಹಿಡಿಯಬೇಡಿರಿ. ಪ್ರತಿಭಟನಾ ಕಾರರನ್ನು ಬಂಧಿಸಬೇಕು. ಪ್ರಯಾಣಿಕರ ಪ್ರಯಾಣ ಸ್ವಾತಂತ್ರ್ಯಕ್ಕೆ ಯಾರೂ ಅಡ್ಡಿಪಡಿಸಬಾರದೆಂದು ಮುಖ್ಯಮಂತ್ರಿ ಸೂಚನೆ ನೀಡಿದರು. ಮಹಿಳೆಯರ ವಿರುದ್ಧ ನಡೆಯುವ ದಾಳಿಗಳಲ್ಲಿ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು. ಮಹಿಳಾ ಸುರಕ್ಷಿತತೆಗೆ ಗರಿಷ್ಠ ಪ್ರಾಮುಖ್ಯತೆ ನೀಡಬೇಕು. ಕೋಮುಗಲಭೆ ಆಗದಂತೆ ಮುಂಜಾಗರೂಕತೆ ಪಾಲಿಸಬೇಕು ಮುಂತಾದ ನಿರ್ದೇಶಗಳನ್ನು ಮುಖ್ಯಮಂತ್ರಿ ಪೊಲೀಸರಿಗೆ ನೀಡಿದ್ದಾರೆ. ಜಿಲ್ಲೆಗಳ ಕಾನೂನು ವ್ಯವಸ್ಥೆಯ ಕುರಿತು ಅವರು ಜಿಲ್ಲಾಮುಖ್ಯಸ್ಥರಲ್ಲಿ ವಿಚಾರಿಸಿ ತಿಳಿದುಕೊಂಡರು.

ಗೃಹ ಅಡಿಶನಲ್ ಚೀಫ್ ಸೆಕ್ರಟರಿ ನಳಿನಿ ನೇಟೊ, ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ, ಇಂಟಲಿಜೆಂಟ್ ಮುಖ್ಯಸ್ಥ ಮುಹಮ್ಮದ್ ಯಾಸೀನ್, ಝೋನಲ್ ಎಡಿಜಿಪಿಗಳು, ರೇಂಜ್ ಐಜಿಗಳು, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹಾಗೂ ಇತರ ಹಿರಿಯ ಪೊಲೀಸಧಿಕಾರಿಗಳು ಮುಖ್ಯಮಂತ್ರಿ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News