×
Ad

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದಗೆ ಕಪಾಳಮೋಕ್ಷ

Update: 2017-02-07 16:43 IST

ರಾಜಕೋಟ್, ಫೆ.6:ಸುರೇಂದ್ರನಗರದಲ್ಲಿ ಭಾರವಾಡ್ ಸಮುದಾಯ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭವೊಂದರಲ್ಲಿ ಭಾಷಣ ಮಾಡಲು ವೇದಿಕೆಯೇರಿದ ಬಿಜೆಪಿಯ ಸ್ಥಳೀಯ ರಾಜ್ಯಸಭಾ ಸದಸ್ಯಶಂಕರ್ ವೇಗದ್ ಅವರಿಗೆ ಕಪಾಳಮೋಕ್ಷ ಮಾಡಿಯೇ ಬಿಟ್ಟ ಘಟನೆ ರವಿವಾರ ನಡೆದಿದೆ.

‘‘ಭಾರವಾಡ್ ಸಮುದಾಯಕ್ಕೆ ನೀವೇನು ಮಾಡಿದ್ದೀರಿ?’’ ಎಂದು ಸಂಸದನ ಮೈಕ್ ಕಿತ್ತುಕೊಂಡು ಕೆನ್ನೆಗೆ ಬಾರಿಸಿ ಪ್ರಶ್ನಿಸಿದ ವ್ಯಕ್ತಿಯನ್ನು ಕೂಡಲೇ ಕಾರ್ಯಕ್ರಮ ಸಂಘಟಕರು ಸ್ಥಳದಿಂದ ಬೇರೆಡೆಗೆ ಕೊಂಡೊಯ್ದರು. ಆದರೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಸಂಸದನ ಕಪಾಳಕ್ಕೆ ಬಾರಿಸಿದವನನ್ನು ರಾಮಭಾಯಿ ಭಾರವಾಡ್ ಎಂದು ಗುರುತಿಸಲಾಗಿದೆ.

ಘಟನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡು ಬಂದರೂ ವೇಗದ್ ಸಾವರಿಸಿಕೊಂಡು ತಮ್ಮ ಭಾಷಣ ಮುಂದುವರಿಸಿ ‘‘ಸಾರ್ವಜನಿಕ ಜೀವನದಲ್ಲಿರುವವರು ಇಂತಹ ಸಂದರ್ಭ ಎದುರಿಸಬೇಕಾಗುತ್ತದೆ,’’ ಎಂದು ಹೇಳಿದರು.

ಭಾರವಾಡ್ ಮತ್ತು ಕೊಲಿಸಮುದಾಯದ ಮಂದಿಯ ನಡುವೆ ಇರುವ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆಯೆಂದು ತಿಳಿಯಲಾಗಿದೆ. ಎರಡೂ ಸಮುದಾಯಗಳ ನಡುವೆ ಇಲ್ಲಿ ಸಂಘರ್ಷಗಳು ಆಗಾಗ ನಡೆಯುತ್ತಿವೆ. ಸಂಸದ ಕೊಲಿ ಸಮುದಾಯಕ್ಕೆ ಸೇರಿದವರೆಂಬುದು ಇಲ್ಲಿ ಗಮನಾರ್ಹ.

ನಂತರ ಪತ್ರಿಕೆಯೊಂದು ಸಂಸದನ ಕೆನ್ನೆಗೆ ಬಾರಿಸಿದವನನ್ನು ಸಂಪರ್ಕಿಸಿದಾಗ ತನಗೇನೂ ವಿಷಾದವಿಲ್ಲವೆಂದು ಹೇಳಿದನಲ್ಲದೆ ಸಂಸದ ಮತ ಬ್ಯಾಂಕ್ ರಾಜಕೀಯ ನಡೆಸುತ್ತಿದ್ದು ಕೊಲಿ ಹಾಗೂ ಭಾರವಾಡ್ ಸಮುದಾಯದ ನಡುವೆ ಸಂಘರ್ಷಕ್ಕೆ ಕಾರಣರಾಗಿದ್ದಾರೆಂದು ಹೇಳಿದ್ದಾನೆ. ಆತ ತಂಗಧ್ ಸಮೀಪದ ಅಮ್ರಾಪುರ ನಿವಾಸಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News