ಸಿಂಗಂ ಗೇ ಸಡ್ಡು : ಚಿತ್ರ ಬಿಡುಗಡೆಯ ದಿನವೇ ...
ಚೆನ್ನೈ,ಫೆ.8: ಪೈರಸಿ ಭೂತ ಭಾರತೀಯ ಚಿತ್ರಗಳನ್ನು ಮತ್ತೆ ಕಾಡತೊಡಗಿದೆ. ಈ ಬಾರಿ ಅದು ತಮಿಳು ಆ್ಯಕ್ಷನ್ ಚಿತ್ರ, ಸೂಪರ್‌ಹಿಟ್ ‘ಸಿಂಗಂ ’ನ ಮೂರನೇ ಭಾಗ ‘ಎಸ್‌ಐ 3’ಕ್ಕೆ ವಕ್ಕರಿಸಿದೆ. ಚಿತ್ರದ ಬಿಡುಗಡೆಯ ದಿನದಂದೇ ತಾನು ತನ್ನ ಸೈಟ್‌ನಲ್ಲಿ ಚಿತ್ರದ ಲೈವ್ ಸ್ಟ್ರೀಮ್ ನೀಡುವುದಾಗಿ ‘ತಮಿಳ್ ರಾಕರ್ಸ್ ’ಜಾಲತಾಣವು ರಾಜಾರೋಷ ಬೆದರಿಕೆಯೊಡ್ಡಿದೆ. ಆನ್‌ಲೈನ್‌ನಲ್ಲಿ ಚಿತ್ರದ ಪೈರೇಟೆಡ್ ಪ್ರತಿಯ ಸೋರಿಕೆಗಾಗಿ ನಿರ್ಮಾಪಕ ಜ್ಞಾನವೇಲ್ ರಾಜಾ ಅವರು ತಮಿಳ್ ರಾಕರ್ಸ್ ಗುಂಪನ್ನು ತೀವ್ರ ತರಾಟೆಗೆತ್ತಿಕೊಂಡ ಬಳಿಕ ಈ ಬೆದರಿಕೆ ಬಂದಿದೆ. ಆದರೆ ನಿಗದಿತ ದಿನಾಂಕದಂದೇ ‘ಎಸ್‌ಐ 3 ’ ಚಿತ್ರವನ್ನು ಬಿಡುಗಡೆ ಮಾಡಲು ರಾಜಾ ನಿರ್ಧರಿಸಿದ್ದಾರೆನ್ನಲಾಗಿದೆ.
ಶನಿವಾರ ವಿಜಯ ಆ್ಯಂಟನಿಯವರ ‘ಯಮನ್ ’ಚಿತ್ರದ ಆಡಿಯೊ ಬಿಡುಗಡೆಯ ಸಂದರ್ಭ ತಮಿಳ್ ರಾಕರ್ಸ್‌ನ್ನು ಕಟುವಾದ ಶಬ್ದಗಳಲ್ಲಿ ತೀವ್ರ ತರಾಟೆಗೆತ್ತಿಕೊಂಡಿದ್ದ ರಾಜಾ,‘‘ಸಿಂಗಂ 3 ಫೆ.9ರಂದು ಬಿಡುಗಡೆಗೊಳ್ಳಲಿದೆ. ಎಲ್ಲ ಆರ್ಥಿಕ ತೊಂದರೆಗಳನ್ನು ನಿವಾರಿಸಿಕೊಂಡು ಆ ದಿನಾಂಕದಂದು ಚಿತ್ರವನ್ನು ಬಿಡುಗಡೆ ಮಾಡುತ್ತೇವೋ ಇಲ್ಲವೋ ನಮಗೇ ಗೊತ್ತಿಲ್ಲ. ಆದರೆ ಆ ವ್ಯಕ್ತಿ ಮಾತ್ರ ಹೇಳಿದ ಸಮಯಕ್ಕೇ ಚಿತ್ರವನ್ನು ಬಿಡುಗಡೆ ಮಾಡುವ ವಿಶ್ವಾಸ ಪ್ರದರ್ಶಿಸಿದ್ದಾನೆ. ನಾನೂ ಸೇರಿದಂತೆ ಇಡೀ ಇಂಡಸ್ಟ್ರಿಯೇ ಈ ಬಗ್ಗೆ ಏನೂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಪೈರಸಿಯನ್ನು ತಡೆಯುವಲ್ಲಿ ಅಸಾಮರ್ಥ್ಯಕ್ಕಾಗಿ ತಮಿಳುನಾಡು ಚಲನಚಿತ್ರ ನಿರ್ಮಾಪಕರ ಮಂಡಳಿಯನ್ನೂ ಅವರು ಟೀಕಿಸಿದ್ದರು.
ಫೆ.2ರಂದು ಬಿಡುಗಡೆಗೊಂಡಿರುವ ಜಯಂ ರವಿ,ಅರವಿಂದ ಸ್ವಾಮಿ ಅಭಿನಯದ ಚಿತ್ರ ‘ಬೋಗನ್ ’ ಕೂಡ ಆನ್‌ಲೈನ್ ಸೋರಿಕೆಯ ಹಾವಳಿಗೆ ತುತ್ತಾಗಿತ್ತು.
ಸೂರ್ಯ,ಅನುಷ್ಕಾ ಶೆಟ್ಟಿ ಮತ್ತು ಶೃತಿ ಹಾಸನ್ ಅಭಿನಯದ ಎಸ್‌ಐ 3 ಚಿತ್ರವನ್ನು ಹರಿ ನಿರ್ದೇಶಿಸಿದ್ದಾರೆ.