ದ್ವಿಪಕ್ಷೀಯ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕ್ ಜೊತೆ ಸಂಪರ್ಕ: ಕೇಂದ್ರ
ಹೊಸದಿಲ್ಲಿ,ಫೆ.8: ಪಾಕಿಸ್ತಾನದೊಂದಿಗೆ ಉತ್ತಮ ನೆರೆಹೊರೆ ಬಾಂಧವ್ಯವನ್ನು ಹೊಂದಿರಲು ತಾನು ಬಯಸಿರುವುದಾಗಿ ಬುಧವಾರ ಪುನರುಚ್ಚರಿಸಿದ ಸರಕಾರವು ದ್ವಿಪಕ್ಷೀಯ ರಾಜತಾಂತ್ರಿಕ ಮಾರ್ಗಗಳ ಮೂಲಕ ತಾನು ಆ ರಾಷ್ಟ್ರದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿತು.
ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು, ಪಾಕ್ ಮೂಲದ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ನಡೆಸಿದ್ದ ಭಯೋತ್ಪಾದಕ ದಾಳಿಗಳಿಂದಾಗಿ 2015ರಲ್ಲಿ ತನ್ನ ಇಸ್ಲಾಮಾಬಾದ್ ಭೇಟಿ ಸಂದರ್ಭ ಒಪ್ಪಿಕೊಂಡಂತೆ ಸಂಕೀರ್ಣ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ ಎಂದರು.
ಪಠಾಣ್‌ಕೋಟ್ ಮತ್ತು ಉರಿ ದಾಳಿಗಳ ಹಿನ್ನೆಲೆಯಲ್ಲಿ ಸರಕಾರದ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಭಯೋತ್ಪಾದಕರನ್ನು ಪ್ರಾಯೋಜಿಸುವ ಮತ್ತು ಬೆಂಬಲಿಸುವ ಪಾಕಿಸ್ತಾನದ ನೀತಿಯು ಭಾರತ ಉಪಖಂಡ ಮತ್ತು ಅದರಾಚೆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಅತ್ಯಂತ ದೊಡ್ಡ ಸವಾಲಾಗಿದೆ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನದಟ್ಟಾಗಿದೆ ಎಂದು ಅವರು ತಿಳಿಸಿದರು. ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆ ಗೊಯ್ಯುವ ಪಾಕಿಸ್ತಾನದ ಪ್ರಯತ್ನವನ್ನು ತಟಸ್ಥಗೊಳಿಸಲೂ ಭಾರತಕ್ಕೆ ಸಾಧ್ಯವಾಗಿದ್ದು, ಹಿಂಸೆ ಮತ್ತು ಭೀತಿವಾದ ಮುಕ್ತ ಪೂರಕ ವಾತಾವರಣವಿದ್ದರೆ ಮಾತ್ರ ಶಾಂತಿಯುತ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಸಹಜ ಸ್ಥಿತಿಗೆ ಮರಳಲು ಸಾಧ್ಯ ಎಂಬ ಸಂದೇಶವನ್ನೂ ಭಾರತದ ಸಂವಾದಕರಿಗೆ ರವಾನಿಸಲಾಗಿದೆ ಎಂದರು.
ಆದರೂ ಈ ಅವಧಿಯಲ್ಲಿ ದ್ವಿಪಕ್ಷೀಯ ರಾಜತಾಂತ್ರಿಕ ಮಾರ್ಗಗಳ ಮೂಲಕ ಉಭಯ ದೇಶಗಳು ಪರಸ್ಪರ ಸಂಪರ್ಕದಲ್ಲಿವೆ ಎಂದರು.